ಅಯ್ಯಪ್ಪ ಸ್ವಾಮಿಯನ್ನು ಪೂಜಿಸಲು ಅಪಾರ ಸಂಖ್ಯೆಯ ಭಕ್ತರು ಶಬರಿಮಲೆಗೆ ಆಗಮಿಸಿದ್ದಾರೆ. ಮಕರವಿಳಕ್ಕು ಉತ್ಸವದ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮಕರವಿಳಕ್ಕು ಉತ್ಸವಕ್ಕೂ ಮುನ್ನ ಅಯ್ಯಪ್ಪನ ದರ್ಶನ ಪಡೆಯಲು ಹಾಗೂ ಮಕರವಿಳಕ್ಕು ಉತ್ಸವದಲ್ಲಿ ಪಾಲ್ಗೊಳ್ಳಲು ಅಪಾರ ಸಂಖ್ಯೆಯ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಆಗಮಿಸಿದ್ದಾರೆ.
ದೇವಸ್ಥಾನದಲ್ಲಿ ಭದ್ರತೆಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಉತ್ಸವದ ಭದ್ರತೆ ಮತ್ತು ಸುಗಮ ನಿರ್ವಹಣೆಗಾಗಿ ಒಟ್ಟು 5,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾತ್ರಿಕರ ಒಳಹರಿವನ್ನು ನಿರ್ವಹಿಸಲು ಮತ್ತು ಧಾರ್ಮಿಕ ಕಾರ್ಯಕ್ರಮದ ಸಮಯದಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ವಿಸ್ತಾರವಾದ ಯೋಜನೆಗಳನ್ನು ಮಾಡಿದ್ದಾರೆ.
ಪಂದಳಂ ದೇವಸ್ಥಾನದಿಂದ ಶಬರಿಮಲೆಗೆ ಪವಿತ್ರ ತಿರುವಾಭರಣಂ ( ಅಯ್ಯಪ್ಪನ ಆಭರಣ) ಹೊತ್ತ ವಾರ್ಷಿಕ ಮೆರವಣಿಗೆ ಪ್ರಾರಂಭವಾಯಿತು. ಜನವರಿ 14 ರಂದು ಆಚರಿಸಲಾಗುವ ಮಕರವಿಳಕ್ಕು ಉತ್ಸವದಲ್ಲಿ ಈ ಆಭರಣಗಳನ್ನು ಅಯ್ಯಪ್ಪ ದೇವರಿಗೆ ಅಲಂಕರಿಸಲಾಗುತ್ತದೆ.
ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಪ್ರತಿನಿಧಿಗಳು ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರೊಂದಿಗೆ ತಿರುವಾಭರಣ ಘೋಷಯಾತ್ರೆ (ಮೆರವಣಿಗೆ) ಬೆಟ್ಟದ ದೇವಸ್ಥಾನಕ್ಕೆ ಪ್ರಯಾಣವನ್ನು ಪ್ರಾರಂಭಿಸಿತು.
ಜನವರಿ 12ರ ಭಾನುವಾರ 60,000, ಜನವರಿ 13ರ ಸೋಮವಾರ 50,000 ಹಾಗೂ ಜನವರಿ 14ರ ಮಂಗಳವಾರ 40,000 ಬುಕಿಂಗ್ ಗೆ ಮಿತಿಗೊಳಿಸಲಾಗಿದೆ ಎಂದು ವರದಿಯಾಗಿದೆ.
ಸಂಜೆ 6:00 ರಿಂದ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಮಕರವಿಳಕ್ಕು ಉತ್ಸವ ಜನವರಿ 19 ರಂದು ಕೊನೆಗೊಳ್ಳುತ್ತದೆ. ಮಕರ ಜ್ಯೋತಿ ದರ್ಶನಕ್ಕಾಗಿ ಈಗಾಗಲೇ ಹಲವು ಭಕ್ತರು ಶಬರಿಮಲೆಗೆ ಆಗಮಿಸಿದ್ದಾರೆ.