ಭಾರತ vs ಪಾಕಿಸ್ತಾನ್ ಪಂದ್ಯಕ್ಕೆ ಜಸ್​ಪ್ರೀತ್ ಬುಮ್ರಾ ಅಲಭ್ಯ

ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವುದು ಖಚಿತವಾಗಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅವರು ಚಾಂಪಿಯನ್ಸ್ ಟ್ರೋಫಿಯ ಮೊದಲ ಸುತ್ತಿನ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ ವೇಳೆ ಜಸ್​ಪ್ರೀತ್ ಬುಮ್ರಾ ಬೆನ್ನಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಅರ್ಧದಲ್ಲೇ ಮೈದಾನ ತೊರೆದಿದ್ದರು. ಅಷ್ಟೇ ಅಲ್ಲದೆ ದ್ವಿತೀಯ ಇನಿಂಗ್ಸ್​ನಲ್ಲಿ ಬೌಲಿಂಗ್ ಮಾಡಿರಲಿಲ್ಲ. ಇದೀಗ ವೈದ್ಯಕೀಯ ಪರೀಕ್ಷೆಗೆ ಒಳಗಾಗಿರುವ ಬುಮ್ರಾಗೆ ಅವರ ಬೆನ್ನಿನಲ್ಲಿ ಊತ ಇರುವುದು ಕಂಡು ಬಂದಿದೆ.

ಹೀಗಾಗಿ ಜಸ್​ಪ್ರೀತ್ ಬುಮ್ರಾಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಇದೇ ಕಾರಣದಿಂದಾಗಿ ಅವರು ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅತ್ತ ಟೀಮ್ ಇಂಡಿಯಾ ಮೊದಲ ಸುತ್ತಿನಲ್ಲಿ ಒಟ್ಟು ಮೂರು ಪಂದ್ಯಗಳನ್ನಾಡಲಿದೆ.

ಫೆಬ್ರವರಿ 20 ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ದುಬೈನ ಇಂಟರ್​ನ್ಯಾಷನಲ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದಲ್ಲಿ ಬುಮ್ರಾ ಕಣಕ್ಕಿಳಿಯುವುದಿಲ್ಲ.

ಇನ್ನು ಟೀಮ್ ಇಂಡಿಯಾದ 2ನೇ ಎದುರಾಳಿ ಪಾಕಿಸ್ತಾನ್. ಹೈವೋಲ್ಟೇಜ್ ಪೈಪೋಟಿಗೆ ಸಾಕ್ಷಿಯಾಗಲಿರುವ ಈ ಪಂದ್ಯವು ಫೆಬ್ರವರಿ 23 ರಂದು ನಡೆಯಲಿದೆ. ದುಬೈ ಅಂತಾರಾಷ್ಟ್ಟೀಯ ಸ್ಟೇಡಿಯಂನಲ್ಲೇ ಜರುಗಲಿರುವ ಈ ಪಂದ್ಯಕ್ಕೂ ಜಸ್​ಪ್ರೀತ್ ಬುಮ್ರಾ ಅಲಭ್ಯರಾಗಲಿದ್ದಾರೆ.

ಹಾಗೆಯೇ ಭಾರತ ತಂಡವು ತನ್ನ ಕೊನೆಯ ಲೀಗ್ ಮ್ಯಾಚ್​ನಲ್ಲಿ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಮಾರ್ಚ್ 2 ರಂದು ದುಬೈನಲ್ಲೇ ನಡೆಯಲಿದೆ. ಈ ಮೂರು ಪಂದ್ಯಗಳಿಂದ ಜಸ್​ಪ್ರೀತ್ ಬುಮ್ರಾ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

ಇನ್ನು ಮಾರ್ಚ್ ಮೊದಲ ವಾರದ ವೇಳೆಗೆ ಜಸ್​ಪ್ರೀತ್ ಬುಮ್ರಾ ಸಂಪೂರ್ಣವಾಗಿ ಫಿಟ್ ಆಗುವ ನಿರೀಕ್ಷೆಯಿದ್ದು, ಹೀಗಾಗಿ ನಾಕೌಟ್ ಹಂತದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಅಂದರೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮಾತ್ರ ಜಸ್​ಪ್ರೀತ್ ಬುಮ್ರಾ ಲಭ್ಯರಿರುವ ಸಾಧ್ಯತೆ ಹೆಚ್ಚು.