ತಿರುಪತಿ ಕಾಲ್ತುಳಿತ: ಗಾಯಗೊಂಡಿದ್ದ 32 ಮಂದಿ ಭಕ್ತರು ಡಿಸ್ಚಾರ್ಜ್​​

ದೇಶದ ಪ್ರಸಿದ್ಧ ಯಾತ್ರಾ ಸ್ಥಳ ಆಂಧ್ರ ಪ್ರದೇಶದಲ್ಲಿನ ತಿರುಪತಿ-ತಿರುಮಲದಲ್ಲಿ ಬುಧವಾರ ರಾತ್ರಿ ಕಾಲ್ತುಳಿತ ಸಂಭವಿಸಿತ್ತು. ಕಾಲ್ತುಳಿತದಲ್ಲಿ ಬಳ್ಳಾರಿ ಮೂಲದ ಓರ್ವ ಮಹಿಳೆ ಸೇರಿದಂತೆ ಒಟ್ಟು ಆರು ಜನ ಮೃತಪಟ್ಟಿದ್ದಾರೆ. 48 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಿರುಪತಿ: ತಿರುಮಲದಲ್ಲಿ ಬುಧವಾರ ರಾತ್ರಿ ಸಂಭವಿಸಿದ್ದ ಕಾಲ್ತುಳಿತದಲ್ಲಿ  ಕಾಲ್ತುಳಿತ ದುರಂತದಲ್ಲಿ ಐವರು ಮಹಿಳೆಯರು ಮತ್ತು ಓರ್ವ ಪುರುಷ ಸೇರಿದಂತೆ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ. ವಿಶಾಖಪಟ್ಟಣದ ರಜನಿ (47), ಲಾವಣ್ಯ (40), ಶಾಂತಿ (34) ಆಂಧ್ರದ ನರಸೀಪಟ್ಟಣಂ ನಿವಾಸಿ ಬೊದ್ದೇಟಿ ನಾಯ್ಡುಬಾಬು ಹಾಗೂ ತಮಿಳುನಾಡಿನ ಸೇಲಂ ನಿವಾಸಿ ಮಲ್ಲಿಕಾ ಮತ್ತು ನಿರ್ಮಲಾ (55) ಮೃತ ಮೃತ ದುರ್ದೈವಿಗಳು. 48 ಜನರಿಗೆ ಗಾಯಗಳಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ರುಯಾ ಆಸ್ಪತ್ರೆಯಲ್ಲಿ 36 ಜನ, ಸ್ವಿಮ್ಸ್​​ ಆಸ್ಪತ್ರೆಯಲ್ಲಿ 12 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 48 ಜನರ ಪೈಕಿ 32 ಜನರು ಚಿಕಿತ್ಸೆ ಪಡೆದು  ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ​

ಆಡಳಿತದ ವೈಫಲ್ಯ ಕಾರಣ: ಟಿಟಿಡಿ ಅಧ್ಯಕ್ಷ

ತಿರುಮಲ-ತಿರುಪತಿಯಲ್ಲಿ ಕಾಲ್ತುಳಿತ ಸಂಭವಿಸಿ 6 ಜನ ಮೃತಪಟ್ಟಿದ್ದಾರೆ. ಇಂದೊಂದು ದುರದೃಷ್ಟಕರ, ದುಃಖಕರ ಘಟನೆ. ಆಡಳಿತದ ವೈಫಲ್ಯದಿಂದ ಘಟನೆ ನಡೆದಿದೆ. ಮತ್ತೆ ಇಂತಹ ಘಟನೆ ನಡೆಯದಂತೆ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದೇವೆ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್​.ನಾಯ್ಡು ಹೇಳಿದರು.

ಸಿಎಂ ಚಂದ್ರಬಾಬು ನಾಯ್ಡು ಕೂಡ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.  ಮೃತರಿಗೆ ಸಂತಾಪ ಸೂಚಿಸಿ, ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾರೆ.  ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಬೆಳಗ್ಗೆ 11.45ಕ್ಕೆ ಸಿಎಂ ಚಂದ್ರಬಾಬು ತಿರುಪತಿಗೆ ಬರಲಿದ್ದಾರೆ. ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲಿದ್ದಾರೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಬಂದ ವದಂತಿಯಿಂದ ಘಟನೆ ನಡೆದಿದೆ. ವೈಕುಂಠ ಏಕಾದಶಿ ಹಿನ್ನೆಲೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದೇ ವೇಳೆ ತಿರುಪತಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆಂದು ವದಂತಿ ಹಬ್ಬಿದೆ.  ಸಾಮಾಜಿಕ ಜಾಲತಾಣಗಳಲ್ಲಿ ಬಂದ ವದಂತಿಯಿಂದ ಭಕ್ತರಲ್ಲಿ ಗೊಂದಲ ಮೂಡಿದೆ. ವದಂತಿಗಳಿಂದ ಗೊಂದಲಕ್ಕೆ ಒಳಗಾಗಿದ್ದ ಭಕ್ತರು ಏಕಾಏಕಿ ನುಗ್ಗಿದ್ದಾರೆ. ಗೇಟ್​ ಓಪನ್ ಮಾಡಿದ ಕೂಡಲೇ ನುಗ್ಗಿದ್ದರಿಂದ ದುರಂತ ನಡೆದಿದೆ. ವದಂತಿಗಳಿಗೆ ಜನರು ಕಿವಿಗೊಡಬೇಡಿ. ಯಾರೇ, ಯಾವುದೇ ಸಮಯದಲ್ಲಿ ತಿರುಪತಿಗೆ ಬರಬಹುದು  ಎಂದರು.