ಶರಣಾಗತಿ ಆಯ್ತು, ಆದರೆ ನಕ್ಸಲರ ಬಳಿ ಇದ್ದ ಶಸ್ತ್ರಾಸ್ತ್ರ ಎಲ್ಲಿ ಹೋಯ್ತು!?

ಬೆಂಗಳೂರು, ಜನವರಿ 9: ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲೇ ಮೋಸ್ಟ್ ವಾಂಟೆಡ್ ನಕ್ಸಲರು 6 ಮಂದಿ ಬುಧವಾರ ಶರಣಾಗಿದ್ದಾರೆ. ಇದರ ಬೆನ್ನಲ್ಲೇ, ಫಾಸ್ಟ್​ ಟ್ರ್ಯಾಕ್ ಕೋರ್ಟ್​ಗಳನ್ನು ನಿರ್ಮಿಸಿ ಅವರಿಗೆ ತ್ವರಿತ ನ್ಯಾಯ ಒದಗಿಸುವ ಯೋಚನೆ ಸರ್ಕಾರಕ್ಕಿದೆ ಎಂದು ಸಿಎಂ ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ಇದೆಲ್ಲ ನಿಜ, ಆದರೆ ಶರಣಾದ ನಕ್ಸಲರ ಬಳಿ ಇದ್ದ ಶಸ್ತ್ರಾಸ್ತ್ರಗಳು ಈಗೆಲ್ಲಿವೆ ಎಂಬ ಪ್ರಶ್ನೆ ಉದ್ಭವಿಸಿದೆ.

ಶರಣಾಗತಿ ವೇಳೆ ನಕ್ಸಲರು ಶಸ್ತ್ರಾಸ್ತ್ರಗಳನ್ನು ಸರೆಂಡರ್ ಮಾಡಿಲ್ಲ ಎನ್ನಲಾಗಿದೆ. ಹೀಗಾಗಿ ಸದ್ಯ ನಕ್ಸಲರ ಶಸ್ತ್ರಾಸ್ತ್ರಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ‌ ಹಾಕುತ್ತಿದ್ದಾರೆ.

ನಕ್ಸಲರು ಶಸ್ತ್ರಾಸ್ತ್ರ ಸಮೇತ ಚಿಕ್ಕಮಗಳೂರು ಕಾಡಿನಲ್ಲಿ ಓಡಾಡುತ್ತಿದ್ದುದಕ್ಕೆ, ಅವರ ಬಳಿ ಶಸ್ತ್ರಾಸ್ತ್ರ ಇರುವ ಬಗ್ಗೆ 4 ತಿಂಗಳ ಹಿಂದೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಹೀಗಾಗಿ ಪೊಲೀಸರು ನಕ್ಸಲರ ಬಳಿ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ನಕ್ಸಲರ ತನಿಖೆಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಡಿವೈಎಸ್​ಪಿ ಬಾಲಾಜಿ ಸಿಂಗ್ ನೇತೃತ್ವದ ತಂಡ ರಚನೆ ಮಾಡಲಾಗಿದೆ. ಸದ್ಯ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳಿರುವ ಬಾಲಾಜಿ ಸಿಂಗ್ ತಂಡ ಮಾಹಿತಿ ಕಲೆಹಾಕಲಿದೆ.

ಆರು ಮಂದಿ ನಕ್ಸಲರಾದ ಶೃಂಗೇರಿ ತಾಲೂಕಿನ ಮುಂಡುಗಾರು ಗ್ರಾಮದ ಲತಾ, ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲಕದ ಸುಂದರಿ, ರಾಯಚೂರು ಮೂಲದ ಮಾರಪ್ಪ ಅರೋಳಿ, ವಸಂತ, ಎನ್.ಜೀಶಾ ಹಲವು ವರ್ಷಗಳ ಸಶಸ್ತ್ರ ಹೋರಾಟಕ್ಕೆ ವಿದಾಯ ಹೇಳಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಬುಧವಾರ ಶರಣಾಗಿದ್ದರು. ಶರಣಾದ ನಕ್ಸಲರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭೆ ನಡೆಸಿದ್ದು, ಅವರ ಸಮಸ್ಯೆ, ಬೇಡಿಕೆಗಳನ್ನು ಆಲಿಸಿದ್ದಾರೆ. ಅಲ್ಲದೇ ಅವರ ಪ್ರೋತ್ಸಾಹ ಧನದ ಬಗ್ಗೆಯೂ ಚರ್ಚಿಸಿದ್ದಾರೆ.

ಬುಧವಾರ ಶರಣಾದ ನಕ್ಸಲರ ಪೈಕಿ ಮಹಿಳೆಯರನ್ನು ಡೈರಿ ಸರ್ಕಲ್ ಬಳಿಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಸದ್ಯ ಅವರನ್ನು ಮಡಿವಾಳ ಎಫ್ಎಸ್ಎಲ್​ಗೆ ಪೊಲೀಸರು ಕರೆದೊಯ್ದಿದ್ದಾರೆ. ಮತ್ತಿಬ್ಬರು ಪುರುಷರನ್ನು ಮಡಿವಾಳದ ಎಫ್ಎಸ್ಎಲ್ ಸ್ಪೇಷಲ್ ಸೆಲ್​​ನಲ್ಲಿಯೇ ಇರಿಸಲಾಗಿತ್ತು.

ಬಿಜೆಪಿನ ಯುವ ಮೋರ್ಚಾ ಆಕ್ಷೇಪ

ಏತನ್ಮಧ್ಯೆ, ಶರಣಾದ ನಕ್ಸಲರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಚಿಕ್ಕಮಗಳೂರಿನ ಬಿಜೆಪಿ ಯುವ ಮೋರ್ಚಾದಿಂದ ವಿರೋಧ ವ್ಯಕ್ತವಾಗಿದೆ. ನಮ್ಮ ಮೇಲೂ ಕೇಸ್​ಗಳಿವೆ, ವಾಪಸ್ ಪಡೆದು ಪ್ಯಾಕೇಜ್ ನೀಡಿ. ಸಂಪೂರ್ಣ ಕೇಸ್ ಕ್ಲಿಯರ್ ಮಾಡಿ ಭೂಮಿ ನೀಡಿ ಎಂದು ಯುವ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಫೇಸ್​ಬುಕ್ ಅಭಿಯಾನವನ್ನೂ ಆರಂಭಿಸಿದೆ. ನಕ್ಸಲರ ಶರಣಾಗತಿ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ. ಕೇಂದ್ರ ಗೃಹ ಇಲಾಖೆಗೂ ಬಿಜೆಪಿ ಕಾರ್ಯಕರ್ತರು ಮನವಿ ಮಾಡಲಿದ್ದಾರೆ.