ಸೈಬರ್‌ ಕ್ರೈಂ ಪೇದೆಗೆ ಹನಿಟ್ರ್ಯಾಪ್‌ – ಪತ್ನಿ ಆತ್ಮಹತ್ಯೆಗೆ ಯತ್ನ

ಕಲಬುರಗಿ: ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೇದೆಯೊಬ್ಬರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿ ಆ ಪೇದೆಯ ಪತ್ನಿಯಿಂದ ಲಕ್ಷಗಟ್ಟಲೆ ಹಣ ಪೀಕಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಸೆನ್ ಪೊಲೀಸ್ ಠಾಣೆಯ ಪೇದೆಯನ್ನು ಮೋಹದ ಪಾಶಕ್ಕೆ ಬೀಳಿಸಿದ್ದ ಪೂಜಾ ಡೊಂಗರಗಾಂವ್ ನಂತರ ಪೇದೆ ಪತ್ನಿಗೆ ಫೋಟೋ ತೋರಿಸಿ 8 ಲಕ್ಷ ರೂ. ವಸೂಲಿ ಮಾಡಿದ್ದಳು. ಈ ಕೃತ್ಯಕ್ಕೆ ಪೂಜಾ ಸಹಚರ ಅಮರಸಿಂಗ್ ಎಂಬಾತ ಸಾಥ್ ನೀಡಿದ್ದ. 

ಪೂಜಾ ಮತ್ತು ಅಮರ್ ಸಿಂಗ್ ಒಂದಾಗಿ 15 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಪೂಜಾ ಮತ್ತಷ್ಟು ಹಣ ಕೇಳಲು ಮುಂದಾಗುತ್ತಿದ್ದಂತೆ ಮನನೊಂದ ಪೇದೆ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಪ್ರಕರಣ ದಾಖಲಾದ ಬಳಿಕ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.