ಬ್ಯಾಟಿಂಗ್‌ ವಿಭಾಗದ ಈ ಲೋಪವೆ ಟೀಂ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ಕಾರಣ

ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿರುವ ಟೀಂ ಇಂಡಿಯಾ ಮೊದಲ ಟೆಸ್ಟ್​ನಲ್ಲಿ ಜಯದ ನಗೆ ಬೀರಿದ್ದರೆ, ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದೆ. ಪರ್ತ್ ಟೆಸ್ಟ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ್ದ ಭಾರತ ತಂಡ ಅಡಿಲೇಡ್‌ನಲ್ಲಿ 10  ವಿಕೆಟ್​ಗಳ ಅವಮಾನಕರ ಸೋಲಿಗೆ ಕೊರಳೊಡ್ಡಬೇಕಾಯಿತು. ಪಿಂಕ್ ಬಾಲ್ ಟೆಸ್ಟ್​ನಲ್ಲಿ ತಂಡದ ಸೋಲಿಗೆ ಬ್ಯಾಟಿಂಗ್‌ ವಿಭಾಗದ ವೈಫಲ್ಯ ದೊಡ್ಡ ಕಾರಣ ಎಂಬುದರಲ್ಲಿ ಸಂದೇಹವಿಲ್ಲ. ಈ ಪಂದ್ಯದಲ್ಲಿ ಭಾರತ ತಂಡದ ಒಬ್ಬನೇ ಒಬ್ಬ ಬ್ಯಾಟ್ಸ್‌ಮನ್​ಗೂ ಅರ್ಧಶತಕದ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಎರಡೂ ಇನಿಂಗ್ಸ್‌ಗಳಲ್ಲಿ ಇಡೀ ತಂಡ 200 ರನ್‌ಗಳ ಒಳಗೆಯೇ ಆಲೌಟ್ ಆಯಿತು. ಇದಕ್ಕೆ ಪೂರಕವಾಗಿ ಪಂದ್ಯದ ನಂತರ ಮಾತನಾಡಿದ್ದ ನಾಯಕ ರೋಹಿತ್ ಶರ್ಮಾ ಕೂಡ ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ ಎಂಬುದನ್ನು ಒಪ್ಪಿಕೊಂಡಿದ್ದರು. ಏತನ್ಮಧ್ಯೆ, ಕಳೆದ 4 ವರ್ಷಗಳಿಂದ ಟೀಂ ಇಂಡಿಯಾ ಬ್ಯಾಟಿಂಗ್‌ ವಿಭಾಗವನ್ನು ಕಾಡುತ್ತಿರುವ ಅದೊಂದು ದೌರ್ಬಲ್ಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಸರಾಸರಿಯಲ್ಲಿ ಭಾರಿ ಕುಸಿತ

ವಾಸ್ತವವಾಗಿ, ಕಳೆದ 4 ವರ್ಷಗಳಲ್ಲಿ ಅಂದರೆ 2020 ರಿಂದ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್​ಗಳು 1000 ಕ್ಕೂ ಅಧಿಕ ರನ್ ಕಲೆಹಾಕಿದ್ದರಾದರೂ ಅವರ ಸರಾಸರಿ ಮಾತ್ರ 35 ಕ್ಕಿಂತ ಕಡಿಮೆ ಇದೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಚೇತೇಶ್ವರ ಪೂಜಾರ ಅವರ ಹೆಸರು ಸೇರಿದೆ. ಕಳೆದ 4 ವರ್ಷಗಳಲ್ಲಿ ಕೊಹ್ಲಿ 32.15 ಸರಾಸರಿ, ರಾಹುಲ್ 33 ಮತ್ತು ಪೂಜಾರ 29.69 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಪೂಜಾರ ಸದ್ಯ ತಂಡದ ಭಾಗವಾಗಿಲ್ಲ. ತಂಡದ ಇತರ ಬ್ಯಾಟ್ಸ್‌ಮನ್‌ಗಳ ಸ್ಥಿತಿಯೂ ಇದಕ್ಕಿಂತ ಉತ್ತಮವಾಗಿಲ್ಲ.

ತಂಡದ ನಾಯಕ ರೋಹಿತ್ ಶರ್ಮಾ ಕಳೆದ 4 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 37.66 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇನ್ನು 2020 ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಶುಭ್‌ಮನ್ ಗಿಲ್ ಅಂದಿನಿಂದ ಇದುವರೆಗೆ 30 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 36.45 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೂಡ ಕಳೆದ 4 ವರ್ಷಗಳಿಂದ ಉತ್ತಮ ಪ್ರದರ್ಶನ ನೀಡಿಲ್ಲ. 2022 ಅನ್ನು ಬಿಟ್ಟರೆ, ಅವರು 40 ಕ್ಕಿಂತ ಕಡಿಮೆ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ.

ಸರಾಸರಿ ಇನ್ನಷ್ಟು ಕುಸಿತ

ಪ್ರಸ್ತುತ ಭಾರತ ತಂಡದಲ್ಲಿರುವ ಐವರು ಅನುಭವಿ ಬ್ಯಾಟ್ಸ್‌ಮನ್‌ಗಳ ಪೈಕಿ ನಾಲ್ವರು ಆಟಗಾರರ ಇತ್ತೀಚಿನ ಪ್ರದರ್ಶನ ಇನ್ನಷ್ಟು ಹಳ್ಳ ಹಿಡಿದಿದೆ. ನಾಯಕ ರೋಹಿತ್ ಈ ವರ್ಷ ಆಡಿರುವ 23 ಇನ್ನಿಂಗ್ಸ್‌ಗಳಲ್ಲಿ ಕೇವಲ 27.2 ಸರಾಸರಿಯಲ್ಲಿ 598 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಕೇವಲ 2 ಶತಕ ಮತ್ತು 2 ಅರ್ಧ ಶತಕಗಳನ್ನು ಮಾತ್ರ ಸಿಡಿಸಿದ್ದಾರೆ. ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈ ವರ್ಷ ಟೆಸ್ಟ್‌ನ 16 ಇನ್ನಿಂಗ್ಸ್‌ಗಳಲ್ಲಿ 26.6 ಸರಾಸರಿಯಲ್ಲಿ 373 ರನ್ ಗಳಿಸಿದ್ದಾರೆ. ಇದಲ್ಲದೆ, ಕೆಎಲ್ ರಾಹುಲ್ 2024 ರಲ್ಲಿ 12 ಟೆಸ್ಟ್ ಇನ್ನಿಂಗ್ಸ್‌ಗಳನ್ನಾಡಿದ್ದು 34.6 ಸರಾಸರಿಯಲ್ಲಿ 381 ರನ್ ಗಳಿಸಿದ್ದಾರೆ. ರಿಷಬ್ ಪಂತ್ ಕೂಡ ಈ ವರ್ಷ 39.2 ಸರಾಸರಿಯಲ್ಲಿ 509 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಇಡೀ ತಂಡಕ್ಕೆ ಪೂರ್ಣ 50 ಓವರ್ ಆಡಲು ಸಾಧ್ಯವಾಗುತ್ತಿಲ್ಲ

ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳ ಕಳಪೆ ಸರಾಸರಿಯು ಭಾರತವು ಟೆಸ್ಟ್‌ನಲ್ಲಿ ಏಕೆ ನಿರಂತರವಾಗಿ ಹೆಣಗಾಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ರನ್ ಗಳಿಸುವ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡವರು ರನ್ ಗಳಿಸದಿದ್ದರೆ ಗೆಲ್ಲುವುದು ಹೇಗೆ?. ಬಾಂಗ್ಲಾದೇಶ ಟೆಸ್ಟ್ ಸರಣಿಯಲ್ಲೂ ಅಶ್ವಿನ್ ಮತ್ತು ಜಡೇಜಾ ಕೆಳ ಕ್ರಮಾಂಕದಲ್ಲಿ ರನ್ ಕಲೆಹಾಕಿದ್ದರು. ಆದರೆ ಅಗ್ರಕ್ರಮಾಂಕದ ಬ್ಯಾಟ್ಸ್​ಮನ್​ಗಳ ಪ್ರದರ್ಶನ ಅಷ್ಟು ಉತ್ತಮವಾಗಿರಲಿಲ್ಲ. ಿದರ ಜೊತೆಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಡೀ ತಂಡ 50 ಓವರ್​ಗಳ ಒಳಗೆಯೇ ಮೂರು ಬಾರಿ ಆಲೌಟ್ ಆಗಿತ್ತು. ಆಸ್ಟ್ರೇಲಿಯಾದಲ್ಲೂ ಇದೇ ಪ್ರವೃತ್ತಿ ಮುಂದುವರೆದಿದ್ದು, ಆಡಿರುವ 2 ಟೆಸ್ಟ್ ಪಂದ್ಯಗಳ 2 ಇನ್ನಿಂಗ್ಸ್​ಗಳಲ್ಲಿ ಇಡೀ ತಂಡಕ್ಕೆ ಪೂರ್ಣ 50 ಓವರ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. ಬ್ಯಾಟ್ಸ್‌ಮನ್‌ಗಳ ಈ ಕಳಪೆ ಸರಾಸರಿ ಹೀಗೆಯೇ ಮುಂದುವರಿದರೆ ಆಸ್ಟ್ರೇಲಿಯಾದಲ್ಲಿ ಮೂರನೇ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವುದು ಕೇವಲ ಕನಸಾಗಿಯೇ ಉಳಿಯಲಿದೆ.