ಫೆಂಗಲ್ ಕಾಟ: ಮಂಗಳೂರಿನಲ್ಲಿ ಅಲೆಗಳ ಅಬ್ಬರ, ಚಿಕ್ಕಬಳ್ಳಾಪುರದಲ್ಲಿ ರಾಗಿ ಬೆಳೆ ನಾಶ, ಕೊಡಗಿನಲ್ಲೂ ಆತಂಕ

ಬೆಂಗಳೂರು: ಫೆಂಗಲ್‌ ಚಂಡಮಾರುತದ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದೆ. ಮೈಸೂರಿನಲ್ಲಿಯೂ ಜಿಟಿ ಜಿಟಿ ಮಳೆಯಾಗುತ್ತಿದ್ದು, ಮೈಸೂರಿನ ಜನರು ಹೈರಾಣಾಗಿದ್ದಾರೆ. ಮೈಸೂರಿನಲ್ಲಿ ಶಾಲಾ ಕಾಲೇಜಿಗೆ ರಜೆ ನೀಡಲಾಗಿದೆ. ಆದರೆ, ಮೈಸೂರು ವಿವಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕಾದ ಅನಿವಾರ್ಯತೆ ಉಂಟಾಗಿತ್ತು.

ಮಂಗಳೂರಿನಲ್ಲಿ ಅಲೆಗಳ ಅಬ್ಬರ

ಬಂಗಾಳಕೊಲ್ಲಿಯ ಫೆಂಗಲ್ ಚಂಡಮಾರುತದ ಪರಿಣಾಮ ಅರಬ್ಬೀ ಸಮುದ್ರಕ್ಕೂ ತಟ್ಟಿದೆ. ದಕ್ಷಿಣ ಕನ್ನಡದ ಸೋಮೇಶ್ವರ, ಬಟ್ಟಪಾಡಿಯ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಗಂಟೆಗೆ 30ರಿಂದ 35 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ ರಾಗಿ ಬೆಳೆ ನಾಶ

ಚಿಕ್ಕಬಳ್ಳಾಪುರದಲ್ಲಿ ಹಾಸುಹೊಕ್ಕಾಗಿ ಬೆಳೆದಿದ್ದ ರಾಗಿ ಬೆಳೆಯನ್ನು ಮಳೆ ನಾಶಪಡಿಸಿದೆ. ನಿರಂತರವಾಗಿ ಮಳೆಯಾಗುತ್ತಿದ್ದು, ರಾಗಿ ಬೆಳೆ ಜಮೀನಿನಲ್ಲೇ ಹಾಳಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತದ ಸ್ಥಿತಿ ನಿರ್ಮಾಣವಾಗಿದೆ.

ಜಿಟಿ ಜಿಟಿ ಮಳೆಯಿಂದ ಕ್ಯಾರೆಟ್, ಬೀಟ್‌ರೂಟ್, ಹೂಕೋಸು, ಆಲೂಗಡ್ಡೆಯೂ ಕೊಳೆಯುವ ಸ್ಥಿತಿಗೆ ಬಂದಿದೆ. ಹಿರೇಕಾಯಿ, ಹಾಗಲಕಾಯಿ, ಸೊರೇಕಾಯಿ, ಬದನೆಕಾಯಿ ಮತ್ತು ಬೀನ್ಸ್‌ಗೆ ರೋಗಬಾಧೆ ತಟ್ಟುವ ಆತಂಕ ಎದುರಾಗಿದೆ. ತಂಪಾದ ವಾತಾವರಣ ಇರುವುದರಿಂದ ಔಷಧ ಸಿಂಪಡಣೆಗೂ ಅಡ್ಡಿಯಾಗುತ್ತಿದೆ. ಹೂವಿನ ತೋಟವೂ ಜಲಯಮವಾಗಿದ್ದು, ರೋಜ, ಸೇವಂತಿ, ಚೆಂಡು ಹೂವು ಬೆಳೆ ಮಳೆಯಿಂದ ನಾಶವಾಗಿವೆ.

ಕೋಲಾರದಲ್ಲೂ ಕೊಳೆಯುತ್ತಿದೆ ರಾಗಿ ಪೈರು

ಕೋಲಾರದಲ್ಲೂ ಭಾರಿ ಮಳೆಯಿಂದಾಗಿ ರಾಗಿ ಪೈರು ಹೊಲದಲ್ಲೇ ಕೊಳೆಯುತ್ತಿದೆ. ಮಳೆಯಿಂದ ರಾಗಿ ತೆನೆ ಮೊಳಕೆಯೊಡೆಯುತ್ತಿದ್ದು ರೈತರು ಕಂಗಾಲಾಗಿದ್ದಾರೆ.

ಕೊಡಗಿನಲ್ಲಿ ಕಾಫಿ, ಭತ್ತ ನಾಶದ ಆತಂಕ

ಕೊಡಗಿನಲ್ಲೂ ತುಂತುರು ಮಳೆಯಾಗುತ್ತಿದ್ದು, ಕಾಫಿ ಮತ್ತು ಭತ್ತದ ಬೆಳೆ ನಾಶವಾಗುವ ಆತಂಕ ಎದುರಾಗಿದೆ. ಕೊಯ್ಲಿಗೆ ಬಂದಿರುವ ಕಾಫಿ ಮತ್ತು ಭತ್ತ ಗದ್ದೆಯಲ್ಲೇ ಮೊಳಕೆ ಒಡೆಯುತ್ತಿದ್ದು, ರೋಗದ ಆತಂಕ ಬಂದೊದಗಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ಬೆಂಗಳೂರಿಗೆ ಇನ್ನೆರಡು ದಿನ ಮಳೆ ಕಾಟ ಫಿಕ್ಸ್!

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಫೆಂಗಲ್ ಅಬ್ಬರಿಸಿ ಹೈರಾಣಾಗಿಸಿದ್ರೆ, ಇತ್ತ ಬೆಂಗಳೂರಿನಲ್ಲಿ ಸೈಲೆಂಟ್ ಆಗೇ ಕಾಟ ಕೊಡ್ತಿದೆ. ಎರಡು ದಿನದಿಂದ ಬಿಸಿಲು ಕಾಣದ ಸಿಲಿಕಾನ್ ಸಿಟಿ ಜನರಿಗೆ ಮತ್ತಷ್ಟು ಮಳೆಯ ಕಾಟ ಎದುರಾಗಲಿದ್ದು, ಮುಂದಿನ ಎರಡ್ಮೂರು ದಿನ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ.