ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

ರಾಯಚೂರು: ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಕವಿತಾಳ ಗ್ರಾಮದ ಬಳಿ ನಡೆದಿದೆ.

ಮೃತ ಬೈಕ್ ಸವಾರನನ್ನು ದೇವತಗಲ್ ಗ್ರಾಮದ ನಿವಾಸಿ ರಂಗನಾಥ ನಾಯಕ (35) ಎಂದು ಗುರುತಿಸಲಾಗಿದೆ.

ಲಿಂಗಸುಗೂರು-ಕವಿತಾಳ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ. ಲಿಂಗಸುಗೂರು ಮೂಲಕ ರಾಯಚೂರಿಗೆ ಬರುತ್ತಿದ್ದ ಬಾದಾಮಿ ಘಟಕಕ್ಕೆ ಸೇರಿದ ವಾಯುವ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸದ್ಯ ಈ ಘಟನೆ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.