ಮುಂಬೈ: ಟಾಟಾ ಟ್ರಸ್ಟ್ ಅಧ್ಯಕ್ಷ ಸ್ಥಾನಕ್ಕೆ ರತನ್ ಟಾಟಾ ಅವರ ಮಲಸಹೋದರ ಹಾಗೂ ಟ್ರೆಂಟ್ ಅಧ್ಯಕ್ಷ ನೋಯೆಲ್ ಟಾಟಾ ಅವರನ್ನು ಆಯ್ಕೆ ಮಾಡಲಾಗಿದೆ.
67 ವರ್ಷದ ನೋಯೆಲ್ ಈಗಾಗಲೇ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿದ್ದಾರೆ, ಇದು ಟಾಟಾ ಸನ್ಸ್‌ನಲ್ಲಿ 66% ಪಾಲನ್ನು ಹೊಂದಿದೆ. 2019ರಲ್ಲಿ ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿ ಸೇರಿಕೊಂಡಿದ್ದ ಇವರು 2022ರಲ್ಲಿ ಸರ್ ದೊರಾಬ್ಜಿ ಟ್ರಸ್ಟ್ ಮಂಡಳಿಗೂ ನೇಮಕಗೊಂಡಿದ್ದರು.
ರತನ್ ಟಾಟಾ ಅವರ ತಂದೆ ನೇವಲ್ ಎರಡು ಮದುವೆಯಾಗಿದ್ದರು. ಮೊದಲ ಪತ್ನಿ ಸೂನಿ ಕಮಿಶರಿಯಟ್, ಎರಡನೇ ಪತ್ನಿ ಸ್ವಿಟ್ಜರ್ಲೆಂಡ್‌ನ ಉದ್ಯಮಿ ಸಿಮೋನ್ ಡ್ಯುನೊಯರ್. ನೇವಲ್ ಮತ್ತು ಸೂನಿ ದಂಪತಿಗೆ ರತನ್ ಮತ್ತು ಜಿಮ್ಮಿ ಟಾಟಾ ಜನಿಸಿದರು. 1940 ರದಶಕದಲ್ಲಿ ನೇವಲ್ ಮತ್ತು ಸೂನಿ ದಂಪತಿ ಬೇರ್ಪಟ್ಟಿದ್ದರು. ಬೇರ್ಪಟ್ಟ ನಂತರ ಸಿಮೋನ್ ಡ್ಯುನೊಯರ್ ಅವರನ್ನು 1955 ರಲ್ಲಿ ನೇವಲ್ ವಿವಾಹವಾದರು. ಈ ದಂಪತಿಯ ಪುತ್ರನೇ ನೇಯಲ್ ಟಾಟಾ.
ಟಾಟಾ ಟ್ರಸ್ಟ್‌ನ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾ ಅವರನ್ನೇ ಆಯ್ಕೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಈಗ ಅಧಿಕೃತವಾಗಿ ಹೆಸರು ಘೋಷಣೆಯಾಗಿದೆ. ನೋಯೆಲ್ ಅವರನ್ನು ಆಯ್ಕೆ ಮಾಡುವ ಮೂಲಕ ಟಾಟಾ ಕುಟುಂಬದ ಸದಸ್ಯರ ಬಳಿಯೇ ಅಧಿಕಾರ ಉಳಿಸಿದಂತೆ ಆಗುತ್ತದೆ.