370ನೇ ವಿಧಿ ರದ್ದಾದ ಬಳಿಕ ಮೊದಲ ಬಾರಿಗೆ ಇಂದು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ

ಶ್ರೀನಗರ ಸೆ. 18: 370ನೇ ವಿಧಿ ರದ್ದಾದ ಬಳಿಕ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ಇಂದು  ಮೊದಲ ಹಂತದಲ್ಲಿ 24 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 2014ರ ನಂತರ ಕಾಶ್ಮೀರದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಿದೆ.

ಅನಂತನಾಗ್, ಪುಲ್ವಾಮಾ, ದೋಡಾ, ಕುಲ್ಗಾಮ್‌, ಶೋಪಿಯಾನ್‌, ರಾಂಬನ್‌ ಸೇರಿದಂತೆ ಒಟ್ಟು 24 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಒಟ್ಟು 219 ಅಭ್ಯರ್ಥಿಗಳು ಮೊದಲ ಹಂತದ ಚುನಾವಣೆಯಲ್ಲಿ ಕಣದಲ್ಲಿದ್ದಾರೆ. 23 ಲಕ್ಷ ಮಂದಿ ಮತದಾರರಿದ್ದು, ಅದರಲ್ಲಿ 5.66 ಲಕ್ಷ ಯುವ ಮತದಾರರಿದ್ದಾರೆ. ಚುನಾವಣಾ ಆಯೋಗ ಮತದಾನಕ್ಕಾಗಿ 125 ಮತಗಟ್ಟೆಗಳನ್ನು ಸ್ಥಾಪಿಸಿದೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ ಮೈತ್ರಿಯಾಗಿ ಸ್ಫರ್ಧೆ ಮಾಡುತ್ತಿದ್ದು, ಪಿಡಿಪಿ ಹಾಗೂ ಬಿಜೆಪಿ ಏಕಾಂಗಿಯಾಗಿ ಕಣಕ್ಕಿಳಿದಿವೆ.  ಮುಂದೆ ಸೆ.25 ರಂದು 26 ಕ್ಷೇತ್ರಗಳಿಗೆ 2ನೇ ಹಂತದ ಚುನಾವಣೆ ಹಾಗೂ ಆ.1 ರಂದು 40 ಕ್ಷೇತ್ರಗಳಿಗೆ 3ನೇ ಹಂತದ ಚುನಾವಣೆ ನಡೆಯುವುದರೊಂದಿಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡು  ಅ.8 ರಂದು ಮತಎಣಿಕೆ ಕಾರ್ಯ ನಡೆಯಲಿದೆ.