ವಿಜಯನಗರ: ವಿಜಯನಗರ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ – ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೊಸಪೇಟೆ ತಾಲೂಕಿನ ಜಿ.ನಾಗಲಾಪೂರ ಗ್ರಾಮದಲ್ಲಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಹೆಣ ಹೂಳಲು ಸಹ ಹೆಣಗಾಡಬೇಕಾಯಿತು.
ಗ್ರಾಮಕ್ಕೆ ಮೀಸಲಿಟ್ಟ ಸ್ಮಶಾನಕ್ಕೆ ಹೋಗಲು ರಸ್ತೆಯೇ ಇಲ್ಲ. ಅಕ್ಕ – ಪಕ್ಕದವರ ಜಮೀನಿನ ಪಕ್ಕದಲ್ಲಿ ಹೋದರೆ ಕಿರಿಕಿರಿ ಮಾಡುತ್ತಾರೆ. ಹೀಗಾಗಿ ಹರಿಯುವ ಹಳ್ಳದಲ್ಲೇ ಹೆಣ ಹೊತ್ತು ಗ್ರಾಮಸ್ಥರು ಸಾಗಿದ್ದರು. ಹೆಣ ಹೊತ್ತು ಸಾಗುವ ವೇಳೆ ನೀರಿನ ರಭಸ ಹೆಚ್ಚಾದರೆ ಹೆಣ ಸಮೇತ ಕೊಚ್ಚಿಹೋಗುವ ಆತಂಕ ಇದೆ.
ಹೆಣ ಹೂಳುವ ಜಾಗ ಗ್ರಾಮದಿಂದ ಒಂದೂವರೆ ಕಿ.ಮೀ ದೂರದಲ್ಲಿದೆ. ಶವ ಸಂಸ್ಕಾರಕ್ಕೆ ಹೋಗಲು ಸೂಕ್ತ ರಸ್ತೆ ಮಾಡಿಕೊಡದೇ ಜಿಲ್ಲಾಡಳಿತ, ಕಂದಾಯ ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಕೆಲವು ದಿನಗಳ ಹಿಂದೆ ಐತಿಹಾಸಿಕ ಒಪ್ಪತ್ತೇಶ್ವರ ರಥೋತ್ಸವ ಇದೇ ಹಳ್ಳದಲ್ಲಿ ಸಾಗಿತ್ತು. ಸ್ಮಶಾನಕ್ಕೆ, ಜಮೀನುಗಳಿಗೆ ಹೋಗಲು ಸೇತುವೆ ನಿರ್ಮಿಸಿ ಕೊಡಲು ಹತ್ತಾರು ಬಾರಿ ಮನವಿ ಮಾಡಿದ್ದಾರೆ. ಆದರೂ ಗ್ರಾಮಸ್ಥರ ಮನವಿಗೆ ಕ್ಯಾರೇ ಎನ್ನದೇ ಶಾಸಕರು, ಸಚಿವರು, ಅಧಿಕಾರಿಗಳ ಧೋರಣೆಗೆ ಕಿಡಿಕಾರಿದ್ದಾರೆ.