ಕುಡಿದ ಅಮಲಿನಲ್ಲಿ ಕುಡುಕರು ಮಾಡುವ ಎಡವಟ್ಟುಗಳು ಒಂದೆರಡಲ್ಲ. ಹೊಟ್ಟೆಗೆ ಒಂದಿಷ್ಟು ಸಾರಾಯಿ ಇಳಿದರೆ ಸಾಕು ಕೆಲವರಿಗೆ ತಾವೇನು ಮಾಡ್ತಿದ್ದೇನೆ ಎಂಬುದು ಕೂಡಾ ಅರಿವಿಗೆ ಬರೋಲ್ಲ. ಹೀಗೆ ಕುಡುಕರ ಕಿತಾಪತಿಗೆ ಸಂಬಂಧಿಸಿದ ಸುದ್ದಿಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಕುಡಿದ ಮತ್ತಿನಲ್ಲಿ ಕುಡುಕನೊಬ್ಬ ನಾಗರ ಹಾವಿನ ಜೊತೆ ಆಟವಾಡಲು ಹೋಗಿ ಆಸ್ಪತ್ರೆ ಸೇರಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಂಠಪೂರ್ತಿ ಕುಡಿದು ನಶೆಯಲ್ಲಿ ತೇಲುವ ಕುಡುಕರಿಗೆ ಕೆಲವೊಮ್ಮೆ ತಾವೇನು ಮಾಡುತ್ತಿದ್ದೇವೆ ಎಂಬುದು ಕೂಡಾ ಅರಿವಿಗೆ ಬರೋಲ್ಲ. ಹೀಗೆ ಕುಡುಕರು ನಶೆಯಲ್ಲಿ ತೂರಾಡುತ್ತಾ, ಬೀದಿ ರಂಪ ಮಾಡುವ, ಎಡವಟ್ಟು ಕೆಲಸ ಮಾಡಿ ಪ್ರಾಣಕ್ಕೆ ಕುತ್ತು ತರುವ ಪಜೀತಿಗಳನ್ನು ಮಾಡುವ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಇಲ್ಲೊಬ್ಬ ಕುಡುಕ ಕೂಡಾ ಕುಡಿದ ಅಮಲಿನಲ್ಲಿ ಎಡವಟ್ಟು ಮಾಡಿಕೊಂಡಿದ್ದು, ರಸ್ತೆಯಲ್ಲಿ ಕಾಣಿಸಿಕೊಂಡ ನಾಗರ ಹಾವಿನ ಜೊತೆ ಚೆಲ್ಲಾಟವಾಡಲು ಹೋಗಿ ಕೊನೆಯಲ್ಲಿ ಆತ ಆಸ್ಪತ್ರೆಗೆ ಸೇರಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಇಲ್ಲಿನ ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿಯ ಕಾಲೇಜು ಆವರಣದ ಸಮೀಪ ಕುಡುಕನೊಬ್ಬ ಮದ್ಯದ ಅಮಲಿನಲ್ಲಿ ನಾಗರ ಹಾವಿನ ಜೊತೆ ಆಟವಾಡಲು ಹೋಗಿ, ಆಸ್ಪತ್ರೆ ಸೇರಿದ್ದಾನೆ. ಕುಡುಕ ವ್ಯಕ್ತಿ ನಡೆದುಕೊಂಡು ಬರುತ್ತಿದ್ದ ವೇಳೆ ಸರಸರನೆ ಬಂದ ನಾಗರ ಹಾವೊಂದು ಕಾಲೇಜು ಆವರಣದ ಪೊದೆಯೊಳಗೆ ಹೋಗಲು ಪ್ರಯತ್ನಿಸುತ್ತದೆ. ಇದನ್ನು ಕಂಡ ಕುಡುಕ ಮಹಾಶಯ, ಭಂಡ ಧೈರ್ಯದಿಂದ ಹಾವನ್ನು ಹಿಡಿದು ರಸ್ತೆಗೆ ತಂದು, ಅದರ ಜೊತೆ ಚೆಲ್ಲಾಟವಾಡಿದ್ದಾನೆ. ಸ್ಥಳೀಯರು ಎಚ್ಚರಿಕೆ ನೀಡಿದರೂ ಕೂಡಾ ಹಾವಿಗೆ ತೊಂದರೆ ಕೊಡುವುದನ್ನು ಮಾತ್ರ ಆತ ಬಿಟ್ಟಿಲ್ಲ. ಕೊನೆಗೆ ಈತನ ಕಾಟ ತಾಳಲಾರದೆ ಹಾವು ಆತನಿಗೆ ಕಚ್ಚಿದೆ. ಆ ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಸುಧಾಕರ್ ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕುಡಿದ ಅಮಲಿನಲ್ಲಿ ತೂರಾಡುತ್ತಿದ್ದ ಕುಡುಕ ಮಹಾಶಯ ನಾಗರ ಹಾವಿನೊಂದಿಗೆ ಆಟವಾಡುತ್ತಿರುವ ಭಯಾನಕ ದೃಶ್ಯವನ್ನು ಕಾಣಬಹುದು.
ಜುಲೈ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 73 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕುಡುಕರು ತಮ್ಮನ್ನು ತಾವು ಬಾಹುಬಲಿ ಅಂತ ಭಾವಿಸಿದ್ದಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾಗರ ಹಾವಿನ ತಾಳ್ಮೆಯನ್ನು ಮೆಚ್ಚಬೇಕುʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ.