ಉಪ್ಪಿನಂಗಡಿ : ಈ ಡಿಜಿಟಲ್ ಯುಗದಲ್ಲಿ ದಾರಿ ಗೊತ್ತಾಗದಿದ್ದರೆ ಗೂಗಲ್ ಮ್ಯಾಪ್ ಬಳುವುದು ಮಾಮೂಲು. ಈಗಂತೂ ಬಹುತೇಕ ಎಲ್ಲರೂ ಗೂಗಲ್ ಮ್ಯಾಪ್ ನೋಡಿಕೊಂಡೇ ಗೊತ್ತಿಲ್ಲದ ಸ್ಥಳಗಳಿಗೆ ಬೈಕ್, ಕಾರುಗಳಲ್ಲಿ ಪ್ರಯಾಣಿಸುತ್ತಿರುತ್ತಾರೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ಈ ಮ್ಯಾಪ್ ನಮ್ಮನ್ನು ದಾರಿ ತಪ್ಪಿಸುವುದು ಉಂಟು. ಹೌದು ಈ ಗೂಗಲ್ ಮ್ಯಾಪ್ ಎಡವಟ್ಟಿನಿಂದ ಕಾರು ನದಿಗೆ ಬಿದ್ದ, ಹೊಂಡಕ್ಕೆ ಬಿದ್ದ ಘಟನೆಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಅಂತಹದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಆಸ್ಪತ್ರೆಯ ಕಡೆಗೆ ಹೋಗಬೇಕಿದ್ದ ಯುವಕರು ಗೂಗಲ್ ಮ್ಯಾಪ್ ನಂಬಿ ಕಾರನ್ನು ಸೀದಾ ಹೊಳೆಗೆ ಇಳಿಸಿದ್ದಾರೆ. ಅದೃಷ್ಟವಶಾತ್ ಈ ಇಬ್ಬರೂ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಈ ಬಗ್ಗೆ ಸುದ್ದಿಯೊಂದು ವೈರಲ್ ಆಗುತ್ತಿದೆ.
ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಮೀಪದ ಪಳ್ಳಂಜಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಕೇರಳದ ಕಾಸರಗೋಡಿನ ತಸ್ರೀಫ್ (36) ಮತ್ತು ಅಬ್ದುಲ್ ರಶೀದ್ (35) ಎಂಬವರು ಉಪ್ಪಿನಂಗಡಿಯಲ್ಲಿನ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ಅವರು ಗೂಗಲ್ ಮ್ಯಾಪ್ ನಂಬಿ ಕಾರನ್ನು ತುಂಬಿ ಹರಿಯುತ್ತಿದ್ದ ಹೊಳೆಗೆ ಇಳಿಸಿದ್ದಾರೆ. ಅದೃಷ್ಟವಶಾತ್ ಈ ಇಬ್ಬರೂ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೂಗಲ್ ಮ್ಯಾಪ್ ಆಧರಿಸಿ ಕಾರು ಚಲಾಯಿಸುತ್ತಿದ್ದ ವೇಳೆ ಪಳ್ಳಂಜಿಯ ಎಂಬಲ್ಲಿನ ಹೊಳೆಯ ಸೇತುವೆ ದಾಟುವಾಗ ಈ ಘಟನೆ ಸಂಭವಿಸಿದೆ. ಜೋರು ಮಳೆಯಿಂದ ಸೇತುವೆ ಸಂಪೂರ್ಣವಾಗಿ ಜಲಾವೃತವಾಗಿದ್ದು, ಸೇತುವೆಯ ಎರಡೂ ಬದಿಯಲ್ಲಿ ಯಾವುದೇ ದಂಡೆ ಇಲ್ಲದ ಕಾರಣ, ಕಾರು ಸೀದಾ ಹೋಗಿ ಹೊಳೆಗೆ ಬಿದ್ದಿದೆ. ಕಾರು ತೇಳುತ್ತಾ ಹೋಗಿ ಅಲ್ಲೇ ದಡದಲ್ಲಿದ್ದ ಮರವೊಂದಕ್ಕೆ ಸಿಕ್ಕಿಹಾಕಿಕೊಂಡಿದ್ದು, ಆ ತಕ್ಷಣ ಯುವಕರು ತಮ್ಮ ಸಮಯಪ್ರಜ್ಞೆ ಬಳಸಿ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಈ ಇಬ್ಬರೂ ಯುವಕರನ್ನು ಬಾರೀ ದೊಡ್ಡ ಅಪಾಯದಿಂದ ಪಾರು ಮಾಡಿದೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.