ಹುಬ್ಬಳ್ಳಿ – ಅಂಕೋಲಾ ರೈಲ್ವೆ ಯೋಜನೆ ಕುರಿತು ಆ.16 ರಂದು ಯಲ್ಲಾಪುರದಲ್ಲಿ ವಿಚಾರ ಸಂಕಿರಣ

ಯಲ್ಲಾಪುರ: ಶತಮಾನದ ಕನಸಾದ ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ನೆನಗುದಿಗೆ ಬಿದ್ದಿದ್ದು, ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗಬೇಕಾದ ಕಾರ್ಯಗಳ ಕುರಿತು ವಿಚಾರ ಸಂಕಿರಣವನ್ನು ಆ.16 ರಂದು ಪಟ್ಟಣದ ಅಡಿಕೆ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಆಗ್ರಹಿಸಿದ್ದಾರೆ.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಘಟಕಗಳೂ ಈ ಕಾರ್ಯಕ್ರಮ ಹಾಗೂ ಹೋರಾಟಕ್ಕೆ ಬೆಂಬಲ ನೀಡಿವೆ. ವಿಚಾರ ಸಂಕಿರಣದಲ್ಲಿ ಸಚಿವ ಶಿವರಾಮ ಹೆಬ್ಬಾರ್, ಸ್ಥಳೀಯ ಜನಪ್ರತಿನಿಧಿಗಳು, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ಹೋರಾಟ ಸಮಿತಿ ಪ್ರಮುಖರು ಭಾಗವಹಿಸಲಿದ್ದಾರೆ. ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಯಲಿದೆ ಎಂದರು.

ಉಳಿದೆಲ್ಲ ಕಡೆ ರೈಲು ಅಥವಾ ಚತುಷ್ಪಥಕ್ಕೆ ಪರಿಸರ ಅಡ್ಡಿ ಬರುವುದಿಲ್ಲ. ಕೇವಲ ಯಲ್ಲಾಪುರ ಭಾಗದಲ್ಲಿ ರೈಲು ಯೋಜನೆ ಆಗುತ್ತದೆ ಎಂತಾದರೆ, ನಿದ್ದೆಯಲ್ಲಿದ್ದ ಡೋಂಗಿ ಪರಿಸರವಾದಿಗಳು ಮೈಕೊಡವಿ ನಿಲ್ಲುತ್ತಾರೆ. ನ್ಯಾಯಾಲಯದಲ್ಲಿ ತಡೆ ತಂದು ವಿಘ್ನ ಸಂತೋಷ ಅನುಭವಿಸುತ್ತಿದ್ದಾರೆ. ಅರಣ್ಯ, ಪರಿಸರ ಯಲ್ಲಾಪುರ ಭಾಗದಲ್ಲಿ ಅಭಿವೃದ್ಧಿಗೆ ಮಾತ್ರ ಅಡ್ಡಿಯಾಗುತ್ತಿದೆ. ಉಳಿದೆಡೆ ಯೊಜನೆಗಳಿಂದ ಅರಣ್ಯ ಪರಿಸರ ಹಾನಿ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಇಡೀ ಉತ್ತರ ಕನ್ನಡವೇ ಪರಿಸರ ಜಿಲ್ಲೆ, ಇಲ್ಲಿ ನುಸುಳಿಕೊಂಡಿರುವ ಕೆಲವು ಡೋಂಗಿ ಪರಿಸರವಾದಿಗಳು ಮಾತ್ರ ತಮ್ಮ ವೈಯುಕ್ತಿಕ ಸ್ವಾರ್ಥಕ್ಕೆ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಇದಕ್ಕೆ ನಮ್ಮ ಜಿಲ್ಲೆಯ ಕೆಲವರ ತೆರೆಮರೆಯ ಕುಮ್ಮುಕ್ಕೂ ಇದೆ ಎಂದು ಆರೋಪಿಸಿದರು. ಇನ್ನಾದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ಯೋಜನೆ ಕಾರ್ಯಗತವಾಗಬೇಕೆಂದು ಒತ್ತಾಯಿಸಿದರು.

ನಿವೃತ್ತ ಉಪನ್ಯಾಸಕ ಬೀರಣ್ಣ ನಾಯಕ ಮೊಗಟಾ, ಪ್ರಮುಖರಾದ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ವಿನೋದ ತಳೆಕರ, ಆರ್.ಜಿ.ಭಟ್ಟ ಹಲಸಖಂಡ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಇತರರಿದ್ದರು.