ಪ್ಯಾಟ್ ಕಮ್ಮಿನ್ಸ್​ಗೆ ಹ್ಯಾಟ್ರಿಕ್ ವಿಕೆಟ್; ಭಾರತಕ್ಕೆ ಈ ಸಲ ಕಪ್! ಹೀಗೊಂದು ಕಾಕತಾಳೀಯ

ಆಸ್ಟ್ರೇಲಿಯಾದ ಬೌಲರ್ ಪ್ಯಾಟ್ ಕಮ್ಮಿನ್ಸ್ 2024 ರ ಟಿ20  ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ತಮ್ಮ ಕೊನೆಯ ಎರಡು ಓವರ್‌ಗಳಲ್ಲಿ ಈ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಪ್ಯಾಟ್ ಕಮಿನ್ಸ್ ಅವರು ಬಾಂಗ್ಲಾ ತಂಡದ ಮಹಮ್ಮದುಲ್ಲಾ, ಮೆಹದಿ ಹಸನ್ ಮತ್ತು ತೌಹೀದ್ ಹೃದಯ್ ಅವರನ್ನು ಸತತ ಮೂರು ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ತಮ್ಮ ಮೊದಲ ಹ್ಯಾಟ್ರಿಕ್ ಪಡೆದರು. ಬಾಂಗ್ಲಾದೇಶದ ಇನಿಂಗ್ಸ್‌ನ 18ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಕಮ್ಮಿನ್ಸ್ ಮಹಮ್ಮದುಲ್ಲಾ ಮತ್ತು ಮೆಹದಿ ಹಸನ್ ಅವರ ವಿಕೆಟ್ ಉರುಳಿಸಿದ್ದರು. ಆ ಬಳಿಕ 20ನೇ ಓವರ್​ನ ಮೊದಲ ಎಸೆತದಲ್ಲಿ ತೌಹೀದ್ ಹೃದಯ್ ಅವರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ 7ನೇ ಹ್ಯಾಟ್ರಿಕ್ ಆಗಿದ್ದರೆ, ಇತ್ತ ಆಸೀಸ್ ಬೌಲರ್ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವುದರೊಂದಿಗೆ ಟೀಂ ಇಂಡಿಯಾ ಈ ಬಾರಿಯ ಚಾಂಪಿಯನ್ ಆಗುವ ಬಯಕೆಗೆ ಮತ್ತಷ್ಟು ಬಲ ತುಂಬಿದ್ದಾರೆ.

ಹೀಗೊಂದು ಕಾಕತಾಳೀಯ

ಬಾಂಗ್ಲಾದೇಶದ ವಿರುದ್ಧ ಕಮ್ಮಿನ್ಸ್ 4 ಓವರ್‌ಗಳಲ್ಲಿ 29 ರನ್ ನೀಡಿ 3 ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಇದರೊಂದಿಗೆ ಬ್ರೆಟ್ ಲೀ ನಂತರ ಟಿ20 ವಿಶ್ವಕಪ್ ಪಿಚ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಆಸ್ಟ್ರೇಲಿಯಾದ ಎರಡನೇ ಬೌಲರ್ ಎನಿಸಿಕೊಂಡರು. 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ನಲ್ಲಿ ಬ್ರೆಟ್ ಲೀ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಆ ವರ್ಷ ಭಾರತ ಟಿ20 ವಿಶ್ವಕಪ್ ಗೆದ್ದಿತ್ತು. ವಿಸ್ಮಯಕಾರಿ ಸಂಗತಿಯೆಂದರೆ ಬ್ರೆಟ್ ಲೀ ಕೂಡ ಬಾಂಗ್ಲಾದೇಶದ ವಿರುದ್ಧವೇ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಈಗ, 2024 ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಆಸ್ಟ್ರೇಲಿಯಾದ ಮತ್ತೊಬ್ಬ ಬೌಲರ್ ಹ್ಯಾಟ್ರಿಕ್‌ ವಿಕೆಟ್ ಪಡೆಯುವುದರೊಂದಿಗೆ ಈ ಬಾರಿಯೂ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ಕಾಕತಾಳೀಯತೆಯ ಸಾಧ್ಯತೆಗಳು ಹೆಚ್ಚುತ್ತಿವೆ.

ಈ ಸಾಧನೆ ಮಾಡಿದ 7ನೇ ಬೌಲರ್

ಟಿ20 ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವದ 7ನೇ ಬೌಲರ್ ಕಮ್ಮಿನ್ಸ್. ಬ್ರೆಟ್ ಲೀ ಈ ಸಾಧನೆ ಮಾಡಿದವರಲ್ಲಿ ಮೊದಲಿಗರು. ಅದರ ನಂತರ, 2021 ರ ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್‌ನ ಕರ್ಟಿಸ್ ಕ್ಯಾಂಫರ್. 2021 ರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾದ ವನಿಂದು ಹಸರಂಗಾ ಮತ್ತು ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಕೂಡ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಇವರಲ್ಲದೆ ಯುಎಇಯ ಕಾರ್ತಿಕ್ ಮೆಯ್ಯಪನ್ ಮತ್ತು ಐರ್ಲೆಂಡ್‌ನ ಜೋಶ್ ಲಿಟಲ್ 2022 ರ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದಿದ್ದರು.