ಬೆಂಗಳೂರು, ಜೂನ್.17: ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿ ಬಕ್ರೀದ್ ಹಿಂದಿನ ದಿನ ಜನರನ್ನು ಬಕ್ರಾ ಮಾಡಲು ಬೆಲೆ ಏರಿಕೆ ಮಾಡಲಾಗಿದೆ. ಊಸರವಳ್ಳಿಗೂ ನಿಮಗೂ ಸರ್ಧೆ ಮಾಡಿದರೆ ಗೆಲ್ಲೋದು ನೀವೆ ಎಂದು ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ತೈಲ ಬೆಲೆ ಹೆಚ್ಚಿಸಿದ ಸರ್ಕಾರದ ನಡೆಗೆ ಬಿಜೆಪಿ ಕೆಂಡಾಮಂಡಲವಾಗಿದೆ. ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದು ಈ ವೇಳೆ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಕ್ತದ ರುಚಿ ನೋಡಿದ ಹುಲಿ ಮತ್ತೆ ಮತ್ತೆ ಅದನ್ನೇ ಬಯಸುತ್ತದೆ. ಆಡಳಿತಕ್ಕೆ ಬಂದ ಕೂಡಲೇ ಗೋಸುಂಬೆ ಕೂಡ ನಾಚುವ ರೀತಿ ಬೆಲೆ ಏರಿಸಿ ಕೇಂದ್ರ ಕಡೆ ಬೊಟ್ಟು ಮಾಡಿದ್ದೀರಿ ಮುಖ್ಯಮಂತ್ರಿಗಳೇ? ಊಸರವಳ್ಳಿಗೂ ನಿಮಗೂ ಸ್ಪರ್ಧೆ ಇರಿಸಿದರೆ ಗೆಲ್ಲುವುದು ನೀವೇ. ಜಿಎಸ್ಟಿ ಜೊತೆ ವೈಎಸ್‌ಟಿ ತಂದ್ರಿ, ಜೊತೆಗೆ ಡಿಕೆ ಟ್ಯಾಕ್ಸ್ ಕೂಡ ಇದೆ. ನಿಮ್ಮದು ನಾಲಗೆಯಾ ಏನೂ ಅಂತಾ ಪ್ರಶ್ನೆ ಮಾಡಬೇಕಾಗುತ್ತೆ. ನಿಮ್ಮದು ನಾಲಿಗೆ ಅಲ್ಲ ಎಕ್ಕಡಕ್ಕಿಂತ ಕಡೆ ಅಂತಾ ಜನ ಹೇಳುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಂಎಲ್ಸಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಸಂಗ್ರಹ ಮಾಡಿದ ಹಣವೆಲ್ಲಾ ರಾಹುಲ್ ಗಾಂಧಿಗೆ ಹೋಗುತ್ತಿದೆ
ಕಾಂಗ್ರೆಸ್ ಸರ್ಕಾರವಿರುವ 3 ಕಡೆಯೂ ಜನರಿಗೆ ನಾಮ ಹಾಕ್ತಾರೆ. ಬಕ್ರೀದ್ ದಿನ ಸಿಎಂ ಮಾತ್ರ ಟೋಪಿ ಹಾಕಿಕೊಳ್ತಾರೆ ಅಂದುಕೊಂಡಿದ್ವಿ. ಆದ್ರೆ ಇವರು ಎಲ್ಲರಿಗೂ ಟೋಪಿ ಹಾಕಿದ್ದಾರೆ. ಚೊಂಬು ಆದರೂ ಯಾವುದಕ್ಕಾದರೂ ಉಪಯೋಗಕ್ಕೆ ಬರುತ್ತದೆ. ಆದರೆ ಕಾಂಗ್ರೆಸ್ ನಾಯಕರು ಕೊಡುವುದು ಹಳೆಯ ಚಿಪ್ಪು. ಚಿಪ್ಪು ಕೂಡ ಮೂರು ತೂತು, ಇವರ ಸರ್ಕಾರವೂ ತೂತು. ಸಂಗ್ರಹ ಮಾಡಿದ ಹಣವೆಲ್ಲಾ ರಾಹುಲ್ ಗಾಂಧಿಗೆ ಹೋಗುತ್ತಿದೆ. ಬೆಲೆ ಇಳಿಸಬೇಕು ಇಲ್ಲಾ ಅವರೇ ಇಳಿಯಬೇಕು. ಇಳಿಯದಿದ್ದರೆ ಹೇಗೆ ಇಳಿಸಬೇಕು ಅಂತಾ ನಮಗೆ ಗೊತ್ತಿದೆ. ನುಂಗಣ್ಣ, ನುಂಗಣ್ಣ ಅಂತಾ ನುಂಗುವ ಕೆಲಸ ಒಂದೇ ಮಾಡ್ತಿದ್ದಾರೆ ಎಂದು ಸಿ.ಟಿ.ರವಿ ಕಿಡಿಕಾರಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಅದಕ್ಕೂ ಮುನ್ನ ವಿಪಕ್ಷ ನಾಯಕ ಆರ್. ಎತ್ತಿನ ಬಂಡಿಯಲ್ಲಿ ಮೆರವಣಿಗೆ ನಡೆಸಿದ್ರು. ಸರ್ಕಾರ ನಿಗದಿ ಮಾಡಿರೋ ದರಕ್ಕೆ ವಾಹನಗಳನ್ನ ಬಳಸೋಕೆ ಆಗಲ್ಲ ಎಂಬ ಸಂದೇಶವನ್ನ ಘಂಟಾಘೋಷವಾಗಿ ಕೊಟ್ಟುಬಿಟ್ರು. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಕೇಸರಿ ಕಲಿಗಳು ಹೋರಾಟ ನಡೆಸಿದ್ರೆ.. ಇದೇ ಫ್ರೀಡಂ ಪಾರ್ಕ್ನಲ್ಲಿ ಅಣಕು ಶವಯಾತ್ರೆಯನ್ನೂ ಮಾಡಲಾಯ್ತು.