ಪಾಕಿಸ್ತಾನ ತಂಡಕ್ಕೂ ಸಂಕಷ್ಟಗಳಿಗೂ ಅವಿನಾಭಾವ ಸಂಬಂಧವಿದ್ದಂತೆ ಕಾಣುತ್ತಿದೆ. ಏಕೆಂದರೆ ಕಳೆದೊಂದು ವರ್ಷದಿಂದ ಈ ತಂಡದ ಮೇಲೆ ಒಂದಿಲ್ಲೊಂದು ಸಂಕಷ್ಟಗಳು ನಿರಂತರ ದಾಳಿ ಇಡುತ್ತಿವೆ. ಇದಕ್ಕೆಲ್ಲ ಪ್ರಮುಖ ಕಾರಣ ತಂಡದ ತೀರ ಕಳಪೆ ಪ್ರದರ್ಶನ. ಕಳೆದ ವರ್ಷ ನಡೆದ ಏಷ್ಯಾಕಪ್ನಿಂದ ಶುರುವಾದ ಪಾಕ್ ತಂಡದ ಸಂಕಷ್ಟಗಳ ಸರಮಾಲೆ ಇದುವರೆಗು ಮುಂದುವರೆಯುತ್ತಲೇ ಇವೆ. ಇದೀಗ ಇಂತಹದ್ದೇ ಹೊಸ ಸಂಕಷ್ಟವೊಂದು ಪಾಕ್ ತಂಡದ ಕೊರಳಿಗೆ ಸುತ್ತಿಕೊಂಡಿದ್ದು, ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ಮತ್ತು ಭಾರತದ ವಿರುದ್ಧ ಹೀನಾಯ ಪ್ರದರ್ಶನ ನೀಡಿದ್ದ ಬಾಬರ್ ಪಡೆಯ ವಿರುದ್ಧ ಪಾಕಿಸ್ತಾನದಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ದೇಶದ್ರೋಹದ ಪ್ರಕರಣ ದಾಖಲು
ವಾಸ್ತವವಾಗಿ ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಪಾಕಿಸ್ತಾನ ತಂಡ ನಿರೀಕ್ಷೆಗೂ ಮೀರಿದ ಕಳಪೆ ಪ್ರದರ್ಶನ ನೀಡಿದೆ. ಆಡಿದ ಮೊದಲ ಎರಡು ಪಂದ್ಯಗಳಲ್ಲೂ ಸೋತ ಪಾಕ್ ಪಡೆ ಇದೀಗ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ಅದರಲ್ಲೂ ಕ್ರಿಕೆಟ್ ಶಿಶು ಅಮೆರಿಕ ಹಾಗೂ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕ್ ತಂಡದ ಸೋಲು ಅದರ ಅಭಿಮಾನಿಗಳಿಗೆ ಆಘಾತ ನೀಡಿದೆ. ಹೀಗಾಗಿ ತಂಡದ ವಿರುದ್ಧ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಇದೀಗ ಬಾಬರ್ ತಂಡಕ್ಕೆ ಹೊಸ ಸಮಸ್ಯೆಯೊಂದು ಎದುರಾಗಿದ್ದು, ಇಡೀ ತಂಡ ಜೈಲು ಸೇರುವ ಆತಂಕದಲ್ಲಿದೆ. ಪಾಕಿಸ್ತಾನದ ವಕೀಲರೊಬ್ಬರು ಕೋಚ್ ಮತ್ತು ಇತರ ಸಿಬ್ಬಂದಿ ಸೇರಿದಂತೆ ಎಲ್ಲಾ ಆಟಗಾರರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿದ್ದಾರೆ. ಇಡೀ ತಂಡ ದೇಶಕ್ಕೆ ದ್ರೋಹ ಬಗೆದಿದೆ ಎಂದು ವಕೀಲರು ಆರೋಪಿಸಿದ್ದಾರೆ.
ನಿಷೇಧ ಹೇರಲು ಆಗ್ರಹ
ಪಾಕಿಸ್ತಾನದ ಗುಜ್ರಾನ್‌ವಾಲಾ ನಗರದ ವಕೀಲರೊಬ್ಬರು ಬಾಬರ್ ಆಝಂ ಮತ್ತು ತಂಡದ ಇತರ ಆಟಗಾರರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿದ್ದಾರೆ. ಇದು ತಂಡದ ಆಟಗಾರರು ಮತ್ತು ಕೋಚ್ ಮತ್ತು ಇತರ ಸಿಬ್ಬಂದಿಯ ಹೆಸರುಗಳನ್ನು ಸಹ ಒಳಗೊಂಡಿದೆ. ಇಡೀ ತಂಡದ ವಿರುದ್ಧ ವಕೀಲರು ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪಾಕಿಸ್ತಾನಿ ಸುದ್ದಿ ವಾಹಿನಿಯ ಪ್ರಕಾರ, ಅಮೆರಿಕ ಮತ್ತು ಭಾರತದ ವಿರುದ್ಧದ ಸೋಲಿನಿಂದ ತನಗೆ ತೀವ್ರ ನೋವಾಗಿದೆ ಎಂದು ವಕೀಲರು ಅರ್ಜಿಯಲ್ಲಿ ತಿಳಿಸಿದ್ದಾರೆ.
ದೇಶದ ಗೌರವವನ್ನು ಪಣಕ್ಕಿಟ್ಟು ವಂಚನೆಯಿಂದ ಕ್ಯಾಪ್ಟನ್ ಬಾಬರ್ ಆಝಂ ಪಡೆ ಹಣ ಗಳಿಸುತ್ತಿದೆ ಎಂದು ವಕೀಲರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವಕೀಲರು ಆಗ್ರಹಿಸಿದ್ದು, ಅದು ಪೂರ್ಣಗೊಳ್ಳುವವರೆಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ನಿಷೇಧಿಸುವಂತೆ ಕೋರಿದ್ದಾರೆ. ವರದಿಯ ಪ್ರಕಾರ, ಈ ಅರ್ಜಿಯನ್ನು ಸಹ ಅನುಮೋದಿಸಲಾಗಿದೆ. ಹೀಗಿರುವಾಗ ಪಾಕ್ ತಂಡಕ್ಕೆ ಈಗ ಜೈಲು ಪಾಲಾಗುವ ಅಪಾಯ ಎದುರಾಗಿದೆ.
ಅಮೆರಿಕ, ಭಾರತದ ವಿರುದ್ಧ ಸೋಲು
ಪಾಕಿಸ್ತಾನವು ಅಮೆರಿಕ ವಿರುದ್ಧ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಿತ್ತು. ಆದರೆ ತನ್ನ ಆರಂಭಿಕ ಪಂದ್ಯದಲ್ಲೇ ಪಾಕ್ ತಂಡ ಸೋಲನ್ನು ಎದುರಿಸಬೇಕಾಯಿತು. ಟೆಕ್ಸಾಸ್‌ನ ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ 160 ರನ್‌ಗಳ ಗುರಿ ನೀಡಿದ್ದು, ಅಮೆರಿಕ 159 ರನ್ ಗಳಿಸಿ ಟೈ ಮಾಡಿಕೊಂಡಿತ್ತು. ನಂತರ ಸೂಪರ್ ಓವರ್‌ನಲ್ಲಿ ಪಾಕಿಸ್ತಾನವನ್ನು ಅಮೆರಿಕ 5 ರನ್‌ಗಳಿಂದ ಸೋಲಿಸಿತು. ನ್ಯೂಯಾರ್ಕ್‌ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ 6 ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಅಂದಿನಿಂದ, ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕ ಪಾಕಿಸ್ತಾನಿ ಅಭಿಮಾನಿಗಳು ತಮ್ಮ ತಂಡದ ಮೇಲೆ ತುಂಬಾ ಕೋಪಗೊಂಡಿದ್ದಾರೆ.