ಬಿಎಸ್ ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ಧ ತೊಡೆತಟ್ಟಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆಎಸ್ ಈಶ್ವರಪ್ಪ ಅವರು ಇಂದು ಉಡುಪಿ ಜಿಲ್ಲೆಯ ಬೈಂದೂರಿನ ಉಪ್ಪಂದದಲ್ಲಿ ಸಮಾವೇಶ ನಡೆಸಿದರು. ಕಾರ್ಯಕರ್ತರಿಗಾಗಿ ಬಿರಿಯಾನಿ ಕೂಡ ಸಿದ್ಧಪಡಿಸಲಾಗುತ್ತಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಫ್ಲೈಯಿಂಗ್ ಸ್ಕ್ವಾಡ್ ಸಮಾವೇಶದ ಮೇಲೆ ದಾಳಿ ನಡೆಸಿ ಬಿರಿಯಾನಿ ನೀಡದಂತೆ ಎಚ್ಚರಿಕೆ ನೀಡಿದೆ.
ಉಡುಪಿ, ಮಾರ್ಚ್ - 31 : ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಮಕ್ಕಳ ವಿರುದ್ಧ ತೊಡೆತಟ್ಟಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆಎಸ್ ಈಶ್ವರಪ್ಪ (KS Eshwarappa) ಅವರು ಇಂದು ಉಡುಪಿ (Udupi) ಜಿಲ್ಲೆಯ ಬೈಂದೂರಿನ ಉಪ್ಪಂದದಲ್ಲಿ ಸಮಾವೇಶ ನಡೆಸಿದರು. ಕಾರ್ಯಕರ್ತರಿಗಾಗಿ ಬಿರಿಯಾನಿ ಕೂಡ ಸಿದ್ಧಪಡಿಸಲಾಗುತ್ತಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಫ್ಲೈಯಿಂಗ್ ಸ್ಕ್ವಾಡ್ (Flying Squad) ಸಮಾವೇಶದ ಮೇಲೆ ದಾಳಿ ನಡೆಸಿ ಬಿರಿಯಾನಿ ಹಂಚದಂತೆ ಎಚ್ಚರಿಕೆ ನೀಡಿದೆ.
ಈಶ್ವರಪ್ಪ ಸಮಾವೇಶದಲ್ಲಿ ಒಂದು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಿದ್ದರು. ಕಾರ್ಯಕರ್ತರಿಗೆ ಮಧ್ಯಾಹ್ನದ ಊಟಕ್ಕೆಂದು ಬಿರಿಯಾನಿ ಕೂಡ ಸಿದ್ಧಪಡಿಸಲಾಗಿತ್ತು. ಆದರೆ, ಸಮಾವೇಶ ನಡೆಯುತ್ತಿದ್ದ ಸಭಾಂಗಣಕ್ಕೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿದ್ದು, ಬಿರಿಯಾನಿ ಸಪ್ಲೈ ಮಾಡಿದರೆ ಚುನಾವಣೆ ವೆಚ್ಚಕ್ಕೆ ಸೇರ್ಪಡೆಗೊಳಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ತಯಾರಿಸುತ್ತಿದ್ದ ಬಿರಿಯಾನಿ ಅಲ್ಲೇ ಬಾಕಿಯಾಗಿದ್ದು, ಬಿರಿಯಾನಿಗಾಗಿ ಕಾದು ಸುಸ್ತಾದ ಕಾರ್ಯಕರ್ತರು, ಬಿರಿಯಾನಿ ತಿನ್ನದೇ ವಾಪಸಾದರು.
ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ಧ ಈಶ್ವರಪ್ಪ ವಾಗ್ದಾಳಿ
ಸಮಾವೇಶದಲ್ಲಿ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ರೀತಿಯಲ್ಲಿ ರಾಜ್ಯದಲ್ಲೂ ಕುಟುಂಬ ರಾಜಕಾರಣ ಇದೆ. ಬಿಜೆಪಿ 28 ಸ್ಥಾನ ಗೆಲ್ಲುವುದು ಮುಖ್ಯ ಅಲ್ಲ, ವಿಜಯೇಂದ್ರ ಮುಖ್ಯಮಂತ್ರಿ ಆಗುವುದು ಯಡಿಯೂರಪ್ಪನಿಗೆ ಮುಖ್ಯವಾಗಿದೆ. ಆದರೆ, ಈ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಅಭ್ಯರ್ಥಿ ರಾಘವೇಂದ್ರ ಸೋಲುತ್ತಾನೆ, ವಿಜಯೇಂದ್ರ ರಾಜೀನಾಮೆ ಕೊಡುತ್ತಾನೆ. ರಾಜ್ಯದಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗಬೇಕು ಎಂದರು.
ಚುನಾವಣೆಗೆ ಮುನ್ನ ನಾನು ಯಾವುದೇ ಆಶ್ವಾಸನೆ ಕೊಡುವುದಿಲ್ಲ. ಗೆದ್ದು ಬಂದು ಎಲ್ಲಾ ಕೆಲಸವನ್ನು ಮಾಡುತ್ತೇನೆ. ಶಿವಮೊಗ್ಗದಲ್ಲೂ ಬೈಂದೂರಲ್ಲಿ ಯಾರು ಲೀಡ್ ನೋಡೋಣ. ನಾಮಪತ್ರ ಸಲ್ಲಿಕೆ ದಿನ ಯಡಿಯೂರಪ್ಪ ರಾಘವೇಂದ್ರನಿಗೆ ನಡುಕ ಆಗಬೇಕು. ರಾಷ್ಟ್ರಭಕ್ತ ಬಳಗ ನಾಮಪತ್ರ ದಿನ ಶಿವಮೊಗ್ಗದಲ್ಲಿ ಜಾತ್ರೆ ಮಾಡುತ್ತದೆ ಎಂದರು.