ಸಂಸ್ಕೃತಿ ಗೊತ್ತಿಲ್ಲದವರಿಗೆ ಕನ್ನಡ ಸಂಸ್ಕೃತಿ ಇಲಾಖೆ ನೀಡಿದ್ದಾರೆ: ಮೋದಿ ಬಗ್ಗೆ ತಂಗಡಗಿ ಹೇಳಿಕೆಗೆ ಸಿಟಿ ರವಿ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ ತಂಗಡಗಿ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಮಾಜಿ ಸಚಿವ ಸಿಟಿ ರವಿ ಖಾರವಾಗಿ ತಿರುಗೇಟು ನೀಡಿದ್ದಾರೆ. ಅಂಥ ಹೇಳಿಕೆ ನೀಡಿರುವ ತಂಗಡಗಿ ಸಂಪುಟದಲ್ಲಿರಲು ಲಾಯಕ್ಕಿಲ್ಲ. ಅವರನ್ನು ಸಿಎಂ ಸಿದ್ದರಾಮಯ್ಯ ವಜಾಗೊಳಿಸಲಿ ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು, ಮಾರ್ಚ್​ 25: ಮೋದಿ ಮೋದಿ ಘೋಷಣೆ ಕೂಗುವ ಯುವಕರು, ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು ಎಂಬ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ ತಂಗಡಗಿ (Shivaraj Tangadagi) ಹೇಳಿಕೆಗೆ ಬಿಜೆಪಿ ನಾಯಕ ಸಿಟಿ ರವಿ (CT Ravi) ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ತಂಗಡಗಿಯನ್ನು ಸಂಪುಟದಿಂದ ಸಿಎಂ ಸಿದ್ದರಾಮಯ್ಯ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಂಸ್ಕೃತಿಯೇ ಗೊತ್ತಿಲ್ಲದವರಿಗೆ ಕನ್ನಡ ಸಂಸ್ಕೃತಿ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ. ಸಚಿವರ ಹೇಳಿಕೆ ಇದು ಕನ್ನಡ ಸಂಸ್ಕೃತಿ ಇಲಾಖೆಗೆ ಮಾಡಿದ ಅಪಚಾರ. ಅವರ ಹೇಳಿಕೆಗೆ ಪ್ರತಿಯಾಗಿ, ‘ಬಾರಪ್ಪ ನಿಮ್ಮಪ್ಪನಿಗೆ ಹುಟ್ಟಿದ್ದರೆ ಹೊಡಿ’ ಎಂದು ಹೇಳಬೇಕು ಅಂದುಕೊಂಡಿದ್ದೆ. ಆದರೆ, ತಂಗಡಗಿ ಮಟ್ಟಕ್ಕೆ ನಾವು ಇಳಿದು ಮಾತನಾಡಲು ಹೋಗಲ್ಲ. ಇಂಥವರನ್ನು ಸಂಪುಟದಲ್ಲಿ ಇಟ್ಟುಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.

ಕೊಪ್ಪಳದ ಕಾರಟಗಿಯಲ್ಲಿ ಮಾತನಾಡಿದ್ದ ತಂಗಡಗಿ, ಮೋದಿ ಸರ್ಕಾರ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿತ್ತು. ಆದರೆ, ಮೋದಿ ಸರ್ಕಾರ ಭರವಸೆ ಈಡೇರಿಸಿಲ್ಲ. ‘ಮೋದಿ ಮೋದಿ’ ಎಂದು ಘೋಷಣೆ ಕೂಗುವ ಯುವಕರು, ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು ಎಂದಿದ್ದರು.