ಬೆಂಗಳೂರಿನ ನಗರತ್ಪೇಟೆಯಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಜೋರಾಗಿ ಸೌಂಡ್ ಇಟ್ಟು ಹನುಮಾನ ಚಾಲಿಸಾ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಲಾಗಿತ್ತು. ಹಲ್ಲೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಹಿಂದೂ ಕಾರ್ಯಕರ್ತರು ನಗರತ್ಪೇಟೆಯಲ್ಲಿ ರ್‍ಯಾಲಿ ನಡೆಸಲು ಯೋಚಿಸಿದ್ದಾರೆ.
ಬೆಂಗಳೂರು, ಮಾರ್ಚ್ 19: ನಗರತ್ಪೇಟೆಯಲ್ಲಿನ (Nagarathpet) ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ (Hanuman Chalisa) ಹಾಡು ಹಾಕಿದ್ದಕ್ಕೆ ಅಂಗಡಿ ಮಾಲಿಕನ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಘಟನಾ ಸ್ಥಳದಲ್ಲಿ ಹನುಮ ಭಕ್ತರು ರ್‍ಯಾಲಿ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಸಂಸದ ತೇಜಸ್ವಿ ಸೂರ್ಯ (Tejasvi Surya), ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರನ್ನು ಪೊಲೀಸರು ವಶಕ್ಕೆ ಪಡೆದರು. ಇನ್ನು ಬಿಜೆಪಿ ಶಾಸಕ ಸುರೇಶ್ ಕುಮಾರ್ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಕೆಪಿಸಿಸಿ ಕಾನೂನು ಘಟಕ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿ ಶಾಸಕ ರವಿಸುಬ್ರಮಣ್ಯ ಅವರು ಮಾರ್ಚ್ 18 ರಂದು ಸ್ಥಳಕ್ಕೆ ಭೇಟಿ ನೀಡಿದ್ದರು. ಅಂಗಡಿಯ ಮುಂದೆ ಗುಂಪು ಸೇರಿಸಿ ಇಂದು (ಮಾ.19) ಮಧ್ಯಾಹ್ನ 12 ಗಂಟೆಗೆ ಹನುಮಾನ್ ಚಾಲೀಸ ಪಠಣೆ ಮಾಡಲು ಕರೆ ನೀಡಿದ್ದಾರೆ. ಅಲ್ಲದೇ ಧಾರ್ಮಿಕ ಘೋಷಣೆಗಳನ್ನು ಕೂಗಿರುತ್ತಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಚುನಾವಣಾ ಆಯೋಗದ ಪ್ರಕಾರ, ಚುನಾವಣೆಯ ಸಂದರ್ಭದಲ್ಲಿ ಕೋಮು, ಮತ, ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಕೃತ್ಯವೆಸಗುವುದು ಅಪರಾಧ. ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಹೀಗಾಗಿ ತೇಜಸ್ವಿ ಸೂರ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದೆ.
ಇನ್ನು ಪ್ರತಿಭಟನೆ ನಡೆದಿದ್ದ ಸ್ಥಳದಲ್ಲಿ ಪೊಲೀಸರು ರೂಟ್ ಮಾರ್ಚ್ ಮಾಡಿದರು. ಸ್ಥಳಕ್ಕೆ ಹೆಚ್ಚಿನ ಪೋಲಿಸರನ್ನು ನಿಯೋಜಿಸಲಾಗಿದ್ದು, ಸಂಪೂರ್ಣ ನಗರವನ್ನು ಪೊಲೀಸರು ಹತೋಟಿಗೆ ತೆಗೆದುಕೊಂಡಿದ್ದಾರೆ.
ಅಷ್ಟಕ್ಕೂ ನಡೆದಿದ್ದು ಏನು?
ಮಾರ್ಚ್ 17 ರಂದು ನಗರತಪೇಟೆಯ ಕೃಷ್ಣ ಟೆಲಿಕಾಂ ಶಾಪ್ನ ಮುಖೇಶ್ ಮೇಲೆ ನಾಲ್ಕೈದು ಮಂದಿ ಹಲ್ಲೆ ನಡೆಸಿದ್ದರು. ಸಂಜೆ ವೇಳೆ ಅಂಗಡಿಯಲ್ಲಿ ಜೋರಾಗಿ ಹುಮಾನ್ ಚಾಲಿಸಾ ಹಾಕಿದ್ದಕ್ಕೆ ಮುಖೇಶ್ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಯ ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆಯಾಗಿದೆ. ಸದ್ಯ ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಸುಲೇಮಾನ್, ಶನವಾಜ್, ಜಾಹೀದ್, ರೋಹಿತ್ ಮತ್ತು ತರುಣ್ ಒಟ್ಟು ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ಮಧ್ಯೆ ಇಂದು, ಘಟನೆ ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಹನುಮಾನ್ ಚಾಲಿಸ್ ರ್‍ಯಾಲಿಗೆ ಕರೆ ನೀಡಿದರು. ನಗರತಪೇಟೆಯ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆಯಲ್ಲಿ ಹಲ್ಲೆಗೊಳಗಾದ ಮುಖೇಶ್ ಸಹ ಭಾಗಿಯಾಗಿದ್ದರು. ಇದೇ ವೇಳೆ ಬಿಜೆಪಿಯ ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಸಹ ಸ್ಥಳಕ್ಕೆ ಆಗಮಿಸಿ, ಱಲಿಗೆ ಬೆಂಬಲ ನೀಡಿದರು.