ನವದೆಹಲಿ, ಫೆಬ್ರವರಿ 1: ಪಿಎಂ ಆವಾಸ್ ಯೋಜನೆಯಡಿ (PMAY) 3 ಕೋಟಿ ಮನೆಗಳನ್ನು ನಿರ್ಮಿಸಲಾಗಿದ್ದು, ಅದನ್ನು 5 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದರು. ಸಂಸತ್ನಲ್ಲಿ ಮಧ್ಯಂತರ ಬಜೆಟ್ ಮಂಡನೆ (Union Budget 2024) ವೇಳೆ ಅವರು, ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಸಾಮಾನ್ಯ ಜನರು ಸರ್ಕಾರದ ಯೋಜನೆಗಳಿಂದ ನೇರವಾಗಿ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದರು. ಕುಟುಂಬಕ್ಕೊಂದು ಮನೆ ಎಂಬ ಕನಸನ್ನು ಸರಕಾರ ನನಸು ಮಾಡುತ್ತಿದೆ. ಸರ್ಕಾರವು ಪ್ರಸ್ತುತ 2 ಕೋಟಿ ಹೊಸ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದೆ ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದರೇನು ಎಂದು? ಈ ಯೀಜನೆ ಅಡಿಯಲ್ಲಿ ಮನೆ ನಿರ್ಮಿಸಲು ಯಾರೆಲ್ಲ ಸರ್ಕಾರದಿಂದ ಆರ್ಥಿಕ ಸಹಾಯವನ್ನು ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದರೇನು?
ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಲಕ್ಷಾಂತರ ಜನರಿಗೆ ಸ್ವಂತ ಮನೆ ನಿರ್ಮಿಸಲು ಸಹಾಯ ಮಾಡುವ ಯೋಜನೆಯಾಗಿದೆ. ವಾಸ್ತವವಾಗಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನವು ಬಡವರಿಗೆ ಮಾತ್ರ ಲಭ್ಯವಿರುತ್ತದೆ. ಆದರೆ ಈಗ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದವರನ್ನು ಸಹ ಅದರ ವ್ಯಾಪ್ತಿಯಲ್ಲಿ ತರಲಾಗಿದೆ. ಆದಾಯದ ಆಧಾರದ ಮೇಲೆ ಹಲವು ವರ್ಗಗಳಿವೆ ಮತ್ತು ಸಾಲದ ಮೊತ್ತವನ್ನು ಆ ವರ್ಗಗಳ ಆಧಾರದ ಮೇಲೆ ಮಾತ್ರ ನಿರ್ಧರಿಸಲಾಗುತ್ತದೆ. ಆರಂಭದಲ್ಲಿ ಯೋಜನೆ ಅಡಿಯಲ್ಲಿ ಗೃಹ ಸಾಲದ ಮೊತ್ತಕ್ಕೆ 3 ರಿಂದ 6 ಲಕ್ಷ ರೂ. ಸಬ್ಸಿಡಿ ಲಭ್ಯವಿತ್ತು. ಈಗ ಅದನ್ನು 18 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಶೇ 46 ಕ್ಕಿಂತ ಹೆಚ್ಚು ಮನೆ ಖರೀದಿದಾರರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಬಗ್ಗೆ ತಿಳಿದಿಲ್ಲ ಎಂಬುದು ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಬಹಿರಂಗಪಡಿಸಿದೆ. ‘ಬೇಸಿಕ್ ಹೋಮ್ ಲೋನ್’ ನಡೆಸಿದ ಈ ಸಮೀಕ್ಷೆಯಲ್ಲಿ ಸಮೀಕ್ಷೆಗೆ ಒಳಗಾದ ಶೇಕಡಾ 17 ರಷ್ಟು ಜನರು ಯೋಜನೆಯಡಿಯಲ್ಲಿ ಗರಿಷ್ಠ 2.67 ಲಕ್ಷ ರೂ.ಗಳ ಸಬ್ಸಿಡಿ ಲಭ್ಯವಿದೆ ಎಂದು ತಿಳಿದುಕೊಂಡಿದ್ದಾರೆ ಎಂದು ಬಹಿರಂಗಪಡಿಸಿತ್ತು.