‘ಅಕ್ಷರ ದಾಸೋಹ ಆಹಾರ ಸಾಮಗ್ರಿಗಳಿಗೆ ದರ ಪರಿಷ್ಕರಣೆ ಮಾಡಿ’

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡು ಜಿಲ್ಲೆಯಾಗಿದ್ದು, ನೆಟ್ವರ್ಕ್ ಸಮಸ್ಯೆಯಿಂದ ಅಕ್ಷರ ದಾಸೋಹ ಮಾಹಿತಿಯನ್ನು ಆನ್ಲೈನ್ ನಲ್ಲಿ ತುಂಬಲು ಸಮಸ್ಯೆಯಾಗುತ್ತಿದೆ. ಕಾರಣ ಆದಷ್ಟು ಸರಳೀಕರಣಗೊಳಿಸಬೇಕೆಂದು ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ ಆಗ್ರಹಿಸಿದ್ದಾರೆ.

ಅವರು ಈ ಕುರಿತು ಹೇಳಿಕೆ ನೀಡಿ, ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ ಅಕ್ಕಿ, ಬೇಳೆ, ಎಣ್ಣೆ, ಹಾಲಿನ ಪೌಡರ್ ಗಳು ಸಕಾಲದಲ್ಲಿ ಶಾಲೆಗಳಿಗೆ ಪೂರೈಕೆಯಾಗುವಂತೆ ಜಿಲ್ಲಾ ಅಕ್ಷರ ದಾಸೋಹ ಅನುಷ್ಠಾನಾಧಿಕಾರಿಗಳಿಗೆ ಸರ್ಕಾರ ಮಾರ್ಗದರ್ಶನ ನೀಡಬೇಕು. ತರಕಾರಿ, ಸಾಂಬಾರು ಪದಾರ್ಥಗಳ ಬೆಲೆ ಹೆಚ್ಚಾಗಿರುವುದರಿಂದ ಶಾಲೆಗೆ ಬಿಡುಗಡೆಯಾಗುವ ಹಣದಲ್ಲಿ ದರ ಪರಿಷ್ಕರಣೆ ಮಾಡಿಕೊಡಬೇಕು.

ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು, ಹಾಲು ಕಾಯಿಸಲು ಹಾಗೂ ಕುಡಿಯುವ ಬಿಸಿ ನೀರು ಕಾಯಿಸಲು ಸಿಲೆಂಡರ್ ಗಾಗಿ ಪ್ರತಿ ವಿದ್ಯಾರ್ಥಿಗಳಿಗೆ ಬಿಡುಗಡೆಯಾಗುವ 94 ಪೈಸೆ 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ, 6,7 ನೇ ತರಗತಿಯವರಿಗೆ 1.34 ರೂ ಸಾಲುವುದಿಲ್ಲ. ದರ ಪಟ್ಟಿಯನ್ನು ಇಂದಿನ ಸಿಲೆಂಡರ್ ದರಕ್ಕೆ ಪರಿಷ್ಕರಿಸಬೇಕು. ಅಕ್ಷರ ದಾಸೋಹ, ಬಿಸಿಯೂಟಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿ ಅಡುಗೆ ಅನಿಲ ಸಿಲೆಂಡರ್ ಗಳನ್ನು ಪೂರೈಸುವ ಎಜೆನ್ಸಿಯವರೇ ಈ ಹಿಂದಿನಂತೆ ಶಾಲೆಗೆ ಪೂರೈಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು

ಬಿಸಿಯೂಟ ಹಾಗೂ ಪೌಷ್ಠಕಾಂಶ ಪೂರಕ ಆಹಾರಗಳ ಸಂಗ್ರಹಣೆ, ಮಾಹಿತಿ ದಾಖಲೀಕರಣ ಇತ್ಯಾದಿಗಳಿಗೇ ಶಿಕ್ಷಕರ ಬಹುತೇಕ ಸಮಯ ವ್ಯಯ ಮಾಡಬೇಕಾಗಿದೆ. ಇದರಿಂದ ಬೋಧನೆಯ ಕಾರ್ಯಕ್ಕೆ ಅಡ್ಡಿ ಉಂಟಾಗುತ್ತಿದೆ, ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗುತ್ತಿದೆ. ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ಇತ್ಯಾದಿಗಳ ಪೂರೈಕೆಯನ್ನು ಅಂಗನವಾಡಿಗಳಲ್ಲಿರುವಂತೆ ಎಜೆನ್ಸಿಯ ಮೂಲಕವೇ ಪೂರೈಸುವಂತಾಗಬೇಕು. ಇಲ್ಲದಿದ್ದಲ್ಲಿ ಸಕಾಲದಲ್ಲಿ ಪೌಷ್ಠಿಕ ಆಹಾರಗಳನ್ನು ಪೂರೈಸುವಲ್ಲಿ ಶಿಕ್ಷಕರು ಹೆಣಗಾಡಬೇಕಾಗುತ್ತಿದೆ. ಕಾರಣ ಶಿಕ್ಷಕರಿಗೆ ಬೋಧನೆಯ ಜತೆಗೆ ಇರುವ ಹೆಚ್ಚಿನ ಜವಾಬ್ದಾರಿಗಳನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.