ದಾಂಡೇಲಿಯ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

ದಾಂಡೇಲಿ : ತಾಲ್ಲೂಕಿನ ಕೇಂದ್ರ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮಾಡಬೇಕೆಂದು ಆಗ್ರಹಿಸಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯು ಬುಧವಾರ ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯ ರಾಜ್ಯ ನಿರ್ದೇಶಕರಾದ ಫೈರೋಜ್ ಫಿರ್ಜಾದೆ, ಸಂಘಟನೆಯ ಪದಾಧಿಕಾರಿಗಳಾದ ಆರ್.ವಿ.ಗಡೆಪ್ಪನವರ್ , ರವಿ ಸುತಾರ್, ಮುಜಿಬಾ ಛಬ್ಬಿ ಮೊದಲಾದವರು ಮಾತನಾಡಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳ ಬಸ್ ನಿಲ್ದಾಣಗಳು ಹೈಟೆಕ್ ಬಸ್ ನಿಲ್ದಾಣಗಳಾಗಿ ಪರಿವರ್ತನೆಗೊಂಡಿವೆ. ಆದರೆ ಇಷ್ಟು ವರ್ಷಗಳಾದರೂ ದಾಂಡೇಲಿಯ ಬಸ್ ನಿಲ್ದಾಣವನ್ನು ಈವರೆಗೆ ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮಾಡಲಾಗಿಲ್ಲ. ಈ ನಿಟ್ಟಿನಲ್ಲಿ ದಾಂಡೇಲಿ ನಗರದಲ್ಲಿರುವ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಶಾಸಕರನ್ನು ಹಾಗೂ ರಾಜ್ಯ ಸರಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಮುಖರುಗಳಾದ ಬಲವಂತ ಬೊಮ್ಮನಳ್ಳಿ, ಅವಿನಾಶ್ ಘೋಡ್ಕೆ, ಶ್ರೀಕಾಂತ್ ಅಸೋದೆ, ರಾಜಶೇಖರ ನಿಂಬಾಳ್ಕರ್, ದಾದಾಪೀರ್, ಪವನ್ ಶಾ, ಕರ್ಣಮ್ಮ ತೋಡಟ್ಟಿ, ನೀಲಾ‌ ಮಾದರ, ಸವಿತಾ ದಂಡಗಿ, ಅಶೋಕ್ ನಾಯ್ಕ, ಮಂಜುಳಾ ಕಾಂಬಳೆ, ಬೇಬಿ, ಸಂಗೀತಾ ಅಮ್ರೆ, ಮೇರಿ, ದಿಲ್ಶಾದ್, ಭಾರ್ಗವಿ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.