ದಾಂಡೇಲಿ : ತಾಲೂಕಿನ ಮೈನಾಳ ಗ್ರಾಮದ ಸೇತುವೆಯ ಕೆಳಗಡೆ ನದಿಯಲ್ಲಿ ಅಪರಿಚಿತ ಯುವತಿಯ ಮೃತ ದೇಹ ಪತ್ತೆಯಾಗಿರುವ ಘಟನೆ ಗುರುವಾರ ನಡೆದಿದೆ.
ಮೈನಾಳ ಗ್ರಾಮದ ಸೇತುವೆಯ ಕೆಳಗಡೆ ನದಿಯಲ್ಲಿ ಶವವೊಂದು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದರು. ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಗ್ರಾಮೀಣ ಠಾಣೆಯ ತನಿಖಾ ವಿಭಾಗದ ಪಿಎಸ್ಐ ಜಗದೀಶ್ ಮತ್ತು ಎಎಸೈ ವೆಂಕಟೇಶ್ ತೆಗ್ಗಿನ ಹಾಗೂ ಪೊಲೀಸ್ ಸಿಬ್ಬಂದಿಗಳ ತಂಡ ಸ್ಥಳೀಯರ ಸಹಕಾರದಲ್ಲಿ ಮೃತ ದೇಹವನ್ನು ಮೇಲಕ್ಕೆ ತಂದು, ಪರಿಶೀಲನೆಯನ್ನು ನಡೆಸಿ ಆನಂತರ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಶವಗಾರದಲ್ಲಿ ಇರಿಸಲಾಗಿದೆ.
ಈ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮವನ್ನು ಕೈಗೊಳ್ಳಲಾಗಿದೆ.
ಮೃತ ಯುವತಿ ಅಂದಾಜು 16 ರಿಂದ 18 ವರ್ಷದವಳಾಗಿದ್ದು, ಕುಸ್ತಿಪಟುವಿನ ರೀತಿಯಲ್ಲಿ ತಲೆಗೂದಲನ್ನು ಬಾಬ್ ಕಟ್ ಮಾಡಿಕೊಂಡಿರುತ್ತಾಳೆ. ಈಕೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.