ಅಂಕೋಲಾ: ರಾಜ್ಯ ಕಂಡ ಅಪರೂಪದ ಜನಾನುರಾಗಿ ನಾಯಕಿ ಬಿಜೆಪಿ ಪಕ್ಷದ ಮೆಚ್ಚಿನ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಕ್ಷ ಸಂಘಟನೆಯಲ್ಲಿ ಅವಿರತವಾಗಿ ಶ್ರಮಿಸಿದ ಪರಿಣಾಮ ಅವರಿಗೆ ಈ ಹುದ್ದೆ ಒಲಿದು ಬಂದಿದೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷರಾಗಿ ಇತ್ತೀಚಿಗೆ ನೇಮಕಗೊಂಡ ವಿಜಯೇಂದ್ರ ಪಕ್ಷ ಸಂಘಟನೆಯಲ್ಲಿ ಬದಲಾವಣೆ ಮಾಡಿದ್ದಾರೆ. ಮುರುಗೇಶ್ ನಿರಾಣಿ, ಹರತಾಳು ಹಾಲಪ್ಪ, ಮಾಳವಿಕಾ ಅವಿನಾಶ್ ಸೇರಿದಂತೆ 10 ಜನರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ರಾಜ್ಯ ಘಟಕದ ವಿವಿಧ ಮೋರ್ಚಾ ಸೇರಿದಂತೆ ಒಟ್ಟಾರೆ ಪಕ್ಷದ ಪ್ರಮುಖ ಹುದ್ದೆಗಳಿಗೆ ಆಯ್ಕೆ ಆದ ಏಕೈಕ ವ್ಯಕ್ತಿ ಎಂದರೆ ರೂಪಾಲಿ ನಾಯ್ಕ.
ಯಾಕೆ ರೂಪಾಲಿ?
ರೂಪಾಲಿ ನಾಯ್ಕ ಜಿಲ್ಲೆ ಕಂಡ ಅಪರೂಪದ ಜನಾನುರಾಗಿ ನಾಯಕಿ. ಗ್ರಾಮ ಪಂಚಾಯಿತಿ ಹಂತದಿಂದ ಶಾಸಕಿ ಹಂತದವರೆಗೆ ರಾಜಕೀಯದ ಏಳುಬೀಳುಗಳನ್ನು ಕಂಡವರು. ಆದರೆ ಎಂದಿಗೂ ತನ್ನ ಜೊತೆಗಿದ್ದ ಜನರನ್ನು ಬಿಟ್ಟುಕೊಟ್ಟವರಲ್ಲ. ಶಾಸಕಿಯಾಗಿ ಮೊದಲ ಬಾರಿಗೆ ಆಯ್ಕೆ ಆಗಿದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿಯ ಕ್ರಾಂತಿ ಮಾಡಿದವರು. ದ್ವೇಷ ರಾಜಕಾರಣ ಪಕ್ಷ ರಾಜಕಾರಣ ಜಾತಿ ರಾಜಕಾರಣಗಳಿಂದ ದೂರವಿದ್ದು ಜನರ ಪ್ರೀತಿಗೆ ಪಾತ್ರರಾದವರು.
ಚುನಾವಣೆಯ ಸಂದರ್ಭದಲ್ಲಿ ಮೂವರು ಮಾಜಿ ಶಾಸಕರು ಸೇರಿ ಅವರನ್ನು ತೇಜೋವಧೆ ಮಾಡಲು ಪ್ರಯತ್ನಿಸಿದ್ದರೂ ಎದೆಗುಂದದೆ ಸಮರ್ಥವಾಗಿ ಎದುರಿಸಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳಲ್ಲಿಯೇ ಅತಿ ಹೆಚ್ಚು ಮತಗಳಿಸಿದರು. ಸೋತ ನಂತರವೂ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಜನಪ್ರಿಯ ಜನಾನುರಾಗಿ ನಾಯಕಿ ಎಂದು ಸಾಬೀತು ಮಾಡಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿ ಬದಲಾವಣೆ ಸಂಗತಿ ಹರಿದಾಡುತ್ತಿದೆ. ಈ ನಡುವೆ ಜನರಿಂದಲೇ ಮುಂದಿನ ಆಯ್ಕೆ ರೂಪಾಲಿ ನಾಯ್ಕ ಎನ್ನುವ ಉತ್ತರ ಬರುತ್ತಿದೆ. ಪ್ರಸ್ತುತ ರಾಜ್ಯ ಬಿಜೆಪಿಯಲ್ಲಿ ಮಹಿಳಾ ನಾಯಕರ ಕೊರತೆ ಕಂಡು ಬರುತ್ತಿದೆ. ಜನರ ಸಮಸ್ಯೆಗಳನ್ನು ಸಮರ್ಥವಾಗಿ ಸರ್ಕಾರದ ಮಟ್ಟದಲ್ಲಿ ತಲುಪಿಸುವ ಹಾಗೆಯೇ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಪಕ್ಷದ ನಾಯಕರು ಈ ವಿಚಾರವನ್ನು ಮನಗಂಡು ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ರೂಪಾಲಿ ನಾಯ್ಕ ಆಯ್ಕೆಗೆ ಬಿಜೆಪಿ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.