ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಇಂದು ಅಂದರೆ ಡಿಸೆಂಬರ್ 19ರ ಮಂಗಳವಾರದಂದು ನಡೆಯುತ್ತಿದೆ. ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದ್ದು, ಈ ಪಂದ್ಯವನ್ನು ಗೆದ್ದರೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ. ಇತ್ತ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಜೀವಂತವಾಗಿರಲು ಬಯಸುತ್ತಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಆಫ್ರಿಕಾ ತಂಡಕ್ಕೆ ಆಘಾತ ಎದುರಾಗಿದ್ದು ತಂಡದ ಇಬ್ಬರು ಸ್ಟಾರ್ ಆಟಗಾರರು ಇಂಜುರಿ ಸಮಸ್ಯೆಯಿಂದಾಗಿ ಏಕದಿನ ಸರಣಿಯಿಂದಲೇ ಹೊರಬಿದ್ದಿದ್ದಾರೆ.
ಆ ಇಬ್ಬರು ಆಟಗಾರರು ಯಾರು?
ವಾಸ್ತವವಾಗಿ ಮೊದಲ ಏಕದಿನ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಆಂಡಿಲ್ ಫೆಹ್ಲುಕ್ವಾಯೊ ಅವರು ಸೈಡ್ ಸ್ಟ್ರೈನ್ ಸಮಸ್ಯೆಯಿಂದ ತೊಂದರೆಗೀಡಾದರು. ಈ ಕಾರಣಕ್ಕಾಗಿ ಅವರು ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಏತನ್ಮಧ್ಯೆ, ವೇಗದ ಬೌಲರ್ ಒಟ್ನಾಯಿಲ್ ಬಾರ್ಟ್‌ಮನ್ ಕೂಡ ಅಭ್ಯಾಸದ ಸಂದರ್ಭದಲ್ಲಿ ಇಂಜುರಿಗೊಂಡಿದ್ದರು. ಹೀಗಾಗಿ ಅವರ ಸ್ಥಾನದಲ್ಲಿ ಬುರಾನ್ ಹೆಂಡ್ರಿಕ್ಸ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಹೆಂಡ್ರಿಕ್ಸ್ ಆಫ್ರಿಕಾ ಪರ ಎಲ್ಲಾ ಮೂರು ಸ್ವರೂಪಗಳನ್ನು ಆಡಿದ್ದಾರೆ. ಲುಂಗಿ ಎನ್‌ಗಿಡಿ ಔಟಾದ ನಂತರ ಅವರು ಟಿ20 ಸರಣಿಗೂ ತಂಡದಲ್ಲಿ ಆಯ್ಕೆಯಾಗಿದ್ದರು.
ದಕ್ಷಿಣ ಆಫ್ರಿಕಾದ ನವೀಕರಿಸಿದ ತಂಡ
ಐಡೆನ್ ಮಾರ್ಕ್ರಾಮ್ (ನಾಯಕ), ನಾಂದ್ರೆ ಬರ್ಗರ್, ಟೋನಿ ಡಿಜಾರ್ಜ್, ಬ್ಯೂರಾನ್ ಹೆಂಡ್ರಿಕ್ಸ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಮಿಹಲಾಲಿ ಎಂಪೊಂಗ್ವಾನಾ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ತಬ್ರೈಜ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಕೈಲೆಡ್ ವೆರ್ರೀಮ್ಸ್, ಕೈಲ್ ವೆರ್ರೆನ್ನೆ ಮತ್ತು ಲಿಜಾದ್ ವಿಲಿಯಮ್ಸ್.
ಸರಣಿ ಕಳೆದುಕೊಳ್ಳುವ ಭೀತಿಯಲ್ಲಿ ಆತಿಥೇಯರು
ದಕ್ಷಿಣ ಆಫ್ರಿಕಾ ತಂಡ ಸರಣಿ ಸೋಲಿನ ಭೀತಿಯಲ್ಲಿದೆ. ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಗೆಲುವು ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತದ ಬೌಲರ್ಗಳ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ 100 ರನ್‌ಗಳ ಗಡಿ ದಾಟುವುದಕ್ಕೂ ಕಷ್ಟಪಡಬೇಕಾಯಿತು. ಈ ಗುರಿ ಬೆನ್ನಟ್ಟಿದ ಭಾರತ ಈ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ಭಾರತದ ಪರ ಬ್ಯಾಟಿಂಗ್ನಲ್ಲಿ ಮಿಂಚಿದ ಸುದರ್ಶನ್ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರೆ, ಬೌಲಿಂಗ್ನಲ್ಲಿ ಮಾರಕ ದಾಳಿ ನಡೆಸಿದ ಅರ್ಷದೀಪ್ ಸಿಂಗ್ ಐದು ವಿಕೆಟ್ ಹಾಗೂ ವೇಶ್ ಖಾನ್ 4 ವಿಕೆಟ್ ಪಡೆದು ಮಿಂಚಿದ್ದರು.