ಬೆಳಗಾವಿ, ಡಿ.14: ಅಧಿವೇಶನದ ನಡುವೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಲವು ಸಂಘಟನೆಗಳು ಸುರ್ವಣ ವಿಧಾನಸೌಧದ ಬಳಿ ಪ್ರತಿಭಟನೆಗಳನ್ನು ನಡೆಸುತ್ತಿವೆ. ಈ ನಡುವೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ತುಂಬುವ ಮದ್ಯ ಪ್ರಿಯರು ಕೂಡ ಪ್ರತಿಭಟನೆಗೆ ಇಳಿದಿದ್ದಾರೆ. ಇವರ ವಿವಿಧ ಬೇಡಿಕೆಗಳನ್ನು ಕೇಳಿ ಸಚಿವ ಸಂತೋಷ್ ಲಾಡ್ ಅವರು ಅಚ್ಚರಿ ಹಾಗೂ ಶಾಕ್ ಆಗಿದ್ದಾರೆ.
ಸುವರ್ಣಗಾರ್ಡನ್ ಟೆಂಟ್‌ನಲ್ಲಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘ ಪ್ರತಿಭಟನೆ ನಡೆಸುತ್ತಿದ್ದು, “ನಿತ್ಯ ದುಡಿ.. ಸತ್ಯ ನುಡಿ.. ಸ್ವಲ್ಪ ಕುಡಿ.. ಮನೆಗೆ ನಡಿ” ಎಂಬ ಘೋಷವಾಕ್ಯದಡಿ ಹೋರಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಚಿವ ಸಂತೋಷ್ ಲಾಡ್, ಪ್ರತಿಭಟನಾನಿರತ ಮದ್ಯಪ್ರಿಯರ ಜೊತೆ ಕುಳಿತು ಶಾಂತಚಿತ್ತದಿಂದ ಸಮಸ್ಯೆ ಆಲಿಸಿದರು.
ಈ ವೇಳೆ ಮದ್ಯಪ್ರಿಯರ ಮನವಿ ಕೇಳಿ ಸಚಿವ ಸಂತೋಷ್ ಲಾಡ್ ಅವರು ಅಚ್ವರಿಗೊಳಗಾಗಿದ್ದಾರೆ. ಹಾಗಿದ್ದರೆ ಮದ್ಯ ಪ್ರಿಯರು ಮುಂದಿಟ್ಟ ಬೇಡಿಕೆಗಳು ಯಾವುವು? ಈ ಕೆಳಗಿನಂತಿವೆ.
- ಮದ್ಯಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು
- ಮದ್ಯ ಮಾರಾಟದಿಂದ ಬರುವ ಆದಾಯದ ಶೇಕಡ 10 ರಷ್ಟು ಮೀಸಲಿಡಬೇಕು
- ಲೀವರ್ ಸಮಸ್ಯೆಯಿಂದ ಬಳಲುವವರಿಗೆ ಚಿಕಿತ್ಸೆ ಕೊಡಿಸಬೇಕು
- ‘ಕುಡುಕ’ ಎಂಬ ಪದ ನಿಷೇಧಿಸಿ ಮದ್ಯ ಪ್ರಿಯರು ಎಂದು ಮಾಡಬೇಕು
- ಒಬ್ಬರಿಗೆ ಒಂದು ಕ್ವಾರ್ಟರ್ ನಿಗದಿ ಮಾಡಬೇಕು
- ಬಾರ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು
- ಬಾರ್‌ಗಳ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು
- ಮದ್ಯಪ್ರಿಯರ ಭವನ ಸ್ಥಾಪಿಸಬೇಕು
- ಡಿಸೆಂಬರ್ 31 ಮದ್ಯಾಪನ ಪ್ರಿಯರ ದಿನ ಎಂದು ಘೋಷಣೆ ಮಾಡಬೇಕು
- ಮದ್ಯ ಸೇವಿಸಿ ಮೃತಪಟ್ಟರೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕು
- ಮದ್ಯಪಾನ ಪ್ರಿಯರ ಕುಟುಂಬದಲ್ಲಿ ವಿವಾಹವಾದರೆ ಎರಡು ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು
ಹೀಗೆ ವಿವಿಧ ಬೇಡಿಕೆಗಳನ್ನು ಮದ್ಯ ಪ್ರಿಯರು ಸಚಿವ ಸಂತೋಷ್ ಲಾಡ್ ಮುಂದಿಟ್ಟಿದ್ದಾರೆ. ಮದ್ಯಪ್ರಿಯರ ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಸಂತೋಷ್ ಲಾಡ್ ಭರವಸೆ ನೀಡಿದ್ದಾರೆ.