ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಧೋನಿ ಹೆಸರಿನಲ್ಲಿದ್ದ ವಿಶೇಷ ದಾಳೆಯನ್ನು ಮುರಿದಿದ್ದಾರೆ. ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆರಂಭದಿಂದಲೇ ಸೌತ್ ಆಫ್ರಿಕಾ ಬೌಲರ್ಗಳನ್ನು ಬೆಂಡೆತ್ತುವ ಮೂಲಕ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಷ್ಟೇ ಅಲ್ಲದೆ 36 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 56 ರನ್ ಬಾರಿಸಿದರು.
ಈ ಅರ್ಧಶತಕದೊಂದಿಗೆ ಸೌತ್ ಆಫ್ರಿಕಾ ವಿರುದ್ಧ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಟೀಮ್ ಇಂಡಿಯಾ ನಾಯಕ ಎಂಬ ಹೆಗ್ಗಳಿಕೆಗೆ ಸೂರ್ಯಕುಮಾರ್ ಯಾದವ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು.
2007 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಭಾರತ ತಂಡದ ನಾಯಕ ಎಂಎಸ್ ಧೋನಿ 45 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ಇದೀಗ 56 ರನ್ ಬಾರಿಸುವ ಮೂಲಕ ಸೌತ್ ಆಫ್ರಿಕಾ ವಿರುದ್ಧ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತದ ನಾಯಕ ಎಂಬ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ತಮ್ಮದಾಗಿಸಿಕೊಂಡಿದ್ದಾರೆ.
ಇದಲ್ಲದೆ ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ 2 ಸಾವಿರ ರನ್ ಪೂರೈಸಿದ ವಿರಾಟ್ ಕೊಹ್ಲಿಯ ದಾಖಲೆಯನ್ನೂ ಕೂಡ ಸರಿಗಟ್ಟಿದ್ದಾರೆ. ಕಿಂಗ್ ಕೊಹ್ಲಿ 56 ಇನಿಂಗ್ಸ್ಗಳ ಮೂಲಕ 2 ಸಾವಿರ ರನ್ ಪೂರೈಸಿದ್ದರು. ಇದೀಗ ಸೂರ್ಯಕುಮಾರ್ ಯಾದವ್ ಕೂಡ 56 ಟಿ20 ಇನಿಂಗ್ಸ್ಗಳ ಮೂಲಕ 2 ಸಾವಿರ ರನ್ಗಳ ಸಾಧನೆ ಮಾಡಿದ್ದಾರೆ.
ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 2 ಸಾವಿರ ರನ್ ಪೂರೈಸಿದ ವಿಶ್ವ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕ ಆರೋನ್ ಫಿಂಚ್ ಹೆಸರಿನಲ್ಲಿತ್ತು.
ಆರೋನ್ ಫಿಂಚ್ 1283 ಎಸೆತಗಳಲ್ಲಿ 2 ಸಾವಿರ ರನ್ ಪೂರೈಸಿ ದಾಖಲೆ ಬರೆದಿದ್ದರು. ಇದೀಗ ಸೂರ್ಯಕುಮಾರ್ ಯಾದವ್ ಕೇವಲ 1164 ಎಸೆತಗಳಲ್ಲಿ 2000 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 2 ಸಾವಿರ ರನ್ ಪೂರೈಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.