ಬೆಳಗಾವಿ ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ಕೊನೆಗೂ ದೂರು ದಾಖಲು

ಬೆಳಗಾವಿ, (ಡಿಸೆಂಬರ್ 05): ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್​ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ದೂರು ದಾಖಲಾಗಿದೆ. ತಂದೆ ಪೃಥ್ವಿ ಸಿಂಗ್ ಪರವಾಗಿ ಮಗ ಜಸ್ವಿರ್ಸಿಂಗ್, ಬೆಳಗಾವಿಯ ಎಪಿಎಂಸಿ ಠಾಣೆಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ, ಸುಜೀತ್ ಜಾಧವ್, ಇಬ್ಬರು ಗನ್ ಮ್ಯಾನ್, ಸದ್ದಾಂ ಎನ್ನುವವರ ವಿರುದ್ಧ ಕೊಲೆ ಯತ್ನ ಜಾತಿನಿಂದನೆ, ಹಾಗೂ ಜೀವಬೆದರಿಕೆ ಹಾಕಿದ್ದರೆಂದು ದೂರಿನಲ್ಲಿ ಉಲ್ಲೇಖವಾಗಿದೆ.

ದೂರಿನಲ್ಲೇನಿದೆ?

2018ರ ಚುನಾವಣೆಯಲ್ಲಿ ಜಯನಗರದ ನಮ್ಮ ಮನೆಯನ್ನ ಚುನಾವಣೆ ಕೆಲಸಕ್ಕೆ ತೆಗೆದುಕೊಂಡಿದ್ದರು. 10ಲಕ್ಷ ರೂಪಾಯಿಗೆ ಮನೆಯನ್ನು ಲೀಸ್ ಗೆ ಕರಾರು ಮಾಡಲಾಗಿತ್ತು. ಲೀಸ್ ಆಗಿದ್ದ ಕರಾರಿನ ಪ್ರಕಾರ ಅವರು ನಡೆದುಕೊಂಡಿಲ್ಲ. ನಾನು ಬಿಜೆಪಿ ಸೇರಿದ ಮೇಲೆ ರಾಜ್ಯ ಎಸ್ಸಿ ಮೋರ್ಚಾಗೆ ಅವಿರೋದ ಆಯ್ಕೆಯಾದೆ. ಆಗ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ನಮ್ಮ ನಡುವಿನ ಸಂಬಂಧ ಸರಿಯಾಗಿ ಉಳಿಯಲಿಲ್ಲ. ಬಿಜೆಪಿ ಸೇರಿದ ಮೇಲೆ ಕೆಲವು ಮೊಬೈಲ್ ಸಂಖ್ಯೆಯಿಂದ ನನಗೆ ಬೆದರಿಕೆ ಬರಲು ಶರುವಾದವು. 16/02/21 ರಂದು ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ಕೂಡ ಕೊಟ್ಟಿದ್ದೆ. ಡಿಸೆಂಬರ್ 04 ರಂದು ಚನ್ನರಾಜ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಅಲ್ಲದೇ ನನ್ನ ಬಳಿಯಿರುವ ಮೊಬೈಲ್‌ ಕಸಿದುಕೊಂಡರು. ಆಷ್ಟೊತ್ತಿಗೆ ನೂಕಾಟ ತಳ್ಳಾಟ ಪ್ರಾರಂಭವಾಯ್ತು. ಅಗ ಸುಜೀತ್ ನನ್ನ ಹಿಡಿದುಕೊಂಡ ಮತ್ತೊಂದೆಡೆ ಸದ್ದಾಂ ಹಲ್ಲೆ ಮಾಡಿದ್ದಾನೆ. ಹರಿತವಾದ ಆಯುಧದದಿಂದ ನನ್ನ ಕೈಗೆ ಹಲ್ಲೆ ಮಾಡಿದ್ದು, ಇದಕ್ಕೆ ಚನ್ನರಾಜ ಹಟ್ಟಿಹೊಳಿ ಪ್ರೋತ್ಸಾಹ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆ ಹಿನ್ನೆಲೆ

ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯರೂ ಆಗಿರುವ ಶಾಸಕ ರಮೇಶ್ ಜಾರಕಿಹೊಳಿ ಅತ್ಯಾಪ್ತ ಪೃಥ್ವಿ ಸಿಂಗ್ (55) ಅವರ ಮೇಲೆ ಜಯನಗರದಲ್ಲಿ ಚಾಕುವಿನಿಂದ ಹಲ್ಲೆ ನಡೆದಿತ್ತು. ಕಾಂಗ್ರೆಸ್ ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ ಆಪ್ತರು ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಇದರ ಹಿಂದೆ ಚನ್ನರಾಜ ಹಟ್ಟಿಹೊಳಿ ಕೈವಾಡವಿರು ಮಾತುಗಳು ಕೇಳಿಬಂದಿದ್ದವು. ಸದ್ಯ ಪೃಥ್ವಿ ಸಿಂಗ್ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.