ಮೈಸೂರು, (ಡಿಸೆಂಬರ್ 04): ಮಾಜಿ ಸಚಿವ ಹೆಚ್‌ಡಿ ರೇವಣ್ಣ ಅವರ ಪತ್ನಿ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭವಾನಿ ರೇವಣ್ಣ ಅವರ ಕಾರಿಗೆ ಬೈಕ್ ಡಿಕ್ಕಿ ಹೊಡೆದಿರುವ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮದ ಬಳಿ ನಡೆದಿದೆ. ಸುಮಾರು ಒಂದುವರೆ ಕೋಟಿ ರೂಪಾಯಿ ಮೌಲ್ಯದ ಟೊಯೋಟಾ ವೆಲ್ಫೇರ್ ಕಾರಿನ ಮುಂಭಾಗ ಡ್ಯಾಮೇಜ್ ಆಗಿದೆ. ಇದರಿಂದ ರೊಚ್ಚಿಗೆದ್ದ ಭವಾನಿ ರೇವಣ್ಣ ಅವರು ಬೈಕ್ ಸವಾರನಿಗೆ ಹಿಗ್ಗಾಮುಗ್ಗ ಜಾಡಿಸಿದ್ದು, ಇದೀಗ ಈ ದೃಶ್ಯದ ವೀಡಿಯೋ ಫುಲ್ ವೈರಲ್ ಆಗಿದೆ.
ರಸ್ತೆಗಿಳಿದು ಬೈಕ್ ಸವಾರನನ್ನು ಭವಾನಿ ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟು ದೂರದಿಂದ ಟೈರ್ ಉಜ್ಜಿಕೊಂಡು ಕಂಟ್ರೋಲ್ ಮಾಡಿದ್ದೀವಿ. ಬೈಕ್ ಓಡ್ಸೋಕೆ ಇತಿಮಿತಿ ಇಲ್ವಾ? ನಿನಗೆ ರೈಟ್ ಸೈಡ್ ಬರೋಕೆ ರೂಲ್ಸ್ ಎಲ್ಲಿದೆ? ಲೆಫ್ಟ್ ಸೈಡ್ ಬರಬೇಕು ನೀನು ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇನ್ನು ಈ ಸಂಬಂಧ ಭವಾನಿ ರೇವಣ್ಣ ಕಾರು ಚಾಲಕ ಮಂಜುನಾಥ್ ಅವರು ಅವರು ಬೈಕ್ ಸವಾರ ಶಿವಣ್ಣ ಎನ್ನುವರ ವಿರುದ್ಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲೇನಿದೆ?
01/12/2023ರಂದು 12.45ರ ಸುಮಾರಿಗೆ ಕೆಲಸ ನಿಮಿತ್ತ ಸಾಲಿಗ್ರಾಮದ ಪ್ರಕಾಶ್ ಮನೆಗೆ ಹೋಗಿದ್ದೆ. ವಾಪಸ್ಸು ಹೊಳೆನರಸೀಪುರಕ್ಕೆ ಹೊರಟಿದ್ದೆ. ಆಗ ರಾಂಪುರ ಜಂಕ್ಷನ್ ಬಳಿ ಎದರುಗಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಅತಿ ವೇಗ ಹಾಗೂ ಅಜಾಗರೂಕತೆಯಿಂದ ಅಡ್ಡ ದಿಡ್ಡಿಯಾಗಿ ಬಂದು ಕಾರಿನ ಮುಂಭಾಗಕ್ಕೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಬೈಕ್ ಸವಾರ ಕೆಳಗೆ ಬಿದ್ದಿದ್ದಾನೆ. ಆದರೆ ಆತನಿಗೆ ಯಾವುದೇ ಗಾಯವಾಗಿಲ್ಲ. ಇನ್ನು ಕಾರಿನ ಬಂಪರ್ ಬ್ಯಾನೆಟ್, ನಂಬರ್ ಪ್ಲೇಟ್ ಮುಂಭಾಗದ ಬಿಡಿ ಭಾಗಗಳು ಜಖಂ ಆಗಿವೆ. ಹೀಗಾಗಿ ಶಿವಣ್ಣ ವಿರುದ್ದ ಕಾನೂನು ಕ್ರಮಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಭವಾನಿ ರೇವಣ್ಣ ಅವರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮನುಷ್ಯನ ಪ್ರಾಣಕ್ಕಿಂತ ತಮ್ಮ ಕಾರಿಗೆ ಆಗಿರುವ ಹಾನಿಯೇ ಹೆಚ್ಚಾಯ್ತಾ? ಅವರಿಂದಲೇ ಆಯ್ಕೆಯಾಗುವ ನಿಮ್ಮ ಈ ವರ್ತನೆ ಸರಿ ಅಲ್ಲ ಎಂದು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ