ರುತುರಾಜ್ ಸಿಡಿಲಬ್ಬರದ ಶತಕಕ್ಕೆ ಹಳೆಯ ದಾಖಲೆಗಳೆಲ್ಲ ಉಡೀಸ್..!

ಗುವಾಹಟಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರದ ಓಪನರ್ ರುತುರಾಜ್ ಗಾಯಕ್ವಾಡ್ ಕೇವಲ 57 ಎಸೆತಗಳಲ್ಲಿ ಅಜೇಯ 123 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದರು.

ರುತುರಾಜ್ ಗಾಯಕ್ವಾಡ್ ಟಿ20 ಮಾದರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಗಾಯಕ್ವಾಡ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಡೆತ್ ಓವರ್​ಗಳಲ್ಲಿ ಗೇರ್ ಬದಲಿಸಿ ಮುಂದಿನ 20 ಎಸೆತಗಳಲ್ಲಿ ತಮ್ಮ ಚೊಚ್ಚಲ ಶತಕ ಪೂರೈಸಿದರು.

ಕೇವಲ 52 ಎಸೆತಗಳಲ್ಲಿ ಶತಕ ಪೂರೈಸಿದ ಗಾಯಕ್ವಾಡ್ ಭಾರತದ ಪರ ಟಿ20ಯಲ್ಲಿ ಶತಕ ಸಿಡಿಸಿರುವ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರ ಕ್ಲಬ್ ಸೇರಿಕೊಂಡರು.

ಗಾಯಕ್ವಾಡ್ ಕಳೆದ ಎರಡು ವರ್ಷಗಳಲ್ಲಿ ಟಿ20 ಶತಕ ಸಿಡಿಸಿದ ಆರನೇ ಭಾರತೀಯ ಎನಿಸಿಕೊಂಡರೆ, ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಪಂದ್ಯದಲ್ಲಿ 123 ರನ್​ಗಳ ಇನ್ನಿಂಗ್ಸ್ ಆಡಿದ ಗಾಯಕ್ವಾಡ್ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಆಟಗಾರ ಎನಿಸಿಕೊಂಡರು. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಶುಭ್​ಮನ್ ಗಿಲ್ ಈ ಮಾದರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಅಜೇಯ 126 ರನ್​ಗಳ ಇನ್ನಿಂಗ್ಸ್ ಆಡಿದ್ದರು.