ನಿಗಮ ಮಂಡಳಿ ನೇಮಕ ವಿಚಾರವಾಗಿ ಹಲವು ಸುತ್ತಿನ ಚರ್ಚೆ: ರಣದೀಪ್ ಸಿಂಗ್ ಸುರ್ಜೇವಾಲ

ಬೆಂಗಳೂರು, ನ.28: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ನಿಗಮ ಮಂಡಳಿ ನೇಮಕ ಸಂಬಂಧ ಸಭೆ ನಡೆಸಲು ಬೆಂಗಳೂರಿನ ತಾಜ್​ ವೆಸ್ಟ್​ ಎಂಡ್​ ಹೋಟೆಲ್​ಗೆ ಆಗಮಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿ ನೇಮಕ ಬಗ್ಗೆ ಹಲವು ಸುತ್ತಿನ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ಎಲ್ಲಾ ಅಂಶಗಳನ್ನು ಪರಿಗಣಿಸಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾನು ಕೂಡ ಇದೇ ಕಾರಣಕ್ಕೆ ಹಲವು ಬಾರಿ ರಾಜ್ಯಕ್ಕೆ ಬಂದಿದ್ದೇನೆ. ಎಲ್ಲಾ ಅಂಶಗಳು ಗಮನದಲ್ಲಿವೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ರಾಜಸ್ಥಾನ, ಛತ್ತೀಸ್​ಗಢದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ

ಪಂಚ ರಾಜ್ಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುತ್ತೇವೆ ಎಂದು ಹೇಳಿದ ಸುರ್ಜೇವಾಲ, ರಾಜಸ್ಥಾನ, ಛತ್ತೀಸ್​ಗಢದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಹೀಗಾಗಿ ಬಿಜೆಪಿಗೆ ಕರ್ನಾಟಕದಲ್ಲಿ ಆದ ಸ್ಥಿತಿಯೇ ಮಧ್ಯಪ್ರದೇಶದಲ್ಲೂ ಆಗುತ್ತದೆ. 2024ರ ಲೋಕಸಭೆ ಚುನಾವಣೆಗೆ ಈ ಚುನಾವಣೆ ಟ್ರೇಲರ್ ಇದ್ದಂತೆ. ಹೊಸ ಅಧ್ಯಾಯ ಇಲ್ಲಿಂದ ಶುರು ಆಗುತ್ತದೆ ಎಂದರು.

ತೆಲಂಗಾಣದಲ್ಲಿ ಕರ್ನಾಟಕ ಸರ್ಕಾರದ ಜಾಹೀರಾತು ಪ್ರಕಟಿಸದಂತೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಸುರ್ಜೇವಾಲ, ಕಾನೂನಿನ ಚೌಕಟ್ಟಿನಲ್ಲೇ ಜಾಹೀರಾತು ನೀಡಿದೆ. ಆದರೆ ಆಯೋಗವು ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಿರುವುದು ಸರಿಯಲ್ಲ. ಚುನಾವಣೆ ಆಯೋಗ ಸಂಪೂರ್ಣ ತಪ್ಪು ಮಾಡಿದೆ. ಬಿಜೆಪಿ ಕೂಡ ಇದೇ ರೀತಿ ಜಾಹೀರಾತು ನೀಡಿತ್ತು. ಇದಕ್ಕೆ ಸೂಕ್ತ ಉತ್ತರ ಕರ್ನಾಟಕ ಸರ್ಕಾರ ನೀಡುತ್ತದೆ ಎಂದರು.