ತೇಜಸ್​ ಯುದ್ಧ ವಿಮಾನದಲ್ಲಿ ಮೋದಿ ಹಾರಾಟ: ಸ್ವಾವಲಂಬನೆಯ ಕ್ಷೇತ್ರದಲ್ಲಿ ನಾವು ಯಾರಿಗೂ ಕಡಿಮೆ ಇಲ್ಲವೆಂದ ಪ್ರಧಾನಿ

ಬೆಂಗಳೂರು, ನವೆಂಬರ್ 25: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತೇಜಸ್‌ ಯುದ್ಧ ವಿಮಾನದಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದ್ದಾರೆ. ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಗೆ ಭೇಟಿ ನೀಡಿದ ಪ್ರಧಾನಿ ತೇಜಸ್‌ನಲ್ಲಿ ಹಾರಾಟ ನಡೆಸಿದರು. ಬಳಿಕ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಸ್ವಾವಲಂಬನೆಯ ಕ್ಷೇತ್ರದಲ್ಲಿ ನಾವು ಜಗತ್ತಿನ ಯಾರಿಗಿಂತಲೂ ಕಡಿಮೆಯಿಲ್ಲ ಎಂದು ಹೆಮ್ಮೆಯಿಂದ ಹೇಳಬಲ್ಲೆ ಎಂದಿದ್ದಾರೆ.

ತಾವು ತೇಜಸ್​ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ ಚಿತ್ರಗಳನ್ನು ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ.

ಇಂದು ತೇಜಸ್‌ನಲ್ಲಿ ಹಾರಾಟ ಮಾಡಿರುವ ನಾನು, ನಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಸ್ವಾವಲಂಬನೆಯ ಕ್ಷೇತ್ರದಲ್ಲಿ ಜಗತ್ತಿನ ಯಾರಿಗಿಂತಲೂ ಕಡಿಮೆ ಇಲ್ಲ ಎಂದು ಅಪಾರ ಹೆಮ್ಮೆಯಿಂದ ಹೇಳಬಲ್ಲೆ. ಭಾರತೀಯ ವಾಯುಪಡೆ, ಡಿಆರ್​ಡಿಒ ಮತ್ತು ಎಚ್​ಎಎಲ್ ಹಾಗೂ ಎಲ್ಲಾ ಭಾರತೀಯರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಮೋದಿ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಭಾರತೀಯ ವಾಯುಪಡೆ ಇತ್ತೀಚೆಗೆ 12 ಸುಧಾರಿತ ಸು 30-ಎಂಕೆಐ (Su-30MKI) ಫೈಟರ್ ಜೆಟ್‌ಗಳ ಖರೀದಿಗಾಗಿ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ಟೆಂಡರ್ ನೀಡಿದೆ. ಇವುಗಳಮನ್ನು ರಷ್ಯಾದ ಮೂಲ ಉಪಕರಣ ತಯಾರಕರ ಸಹಭಾಗಿತ್ವದಲ್ಲಿ ಎಚ್​ಎಎಲ್ ಭಾರತದಲ್ಲಿ ತಯಾರಿಸಲಿದೆ ಎಂದು ರಕ್ಷಣಾ ಮೂಲಗಳು ಈ ಹಿಂದೆಯೇ ತಿಳಿಸಿದ್ದವು. ಈ ಎಲ್ಲ ಬೆಳವಣಿಗೆಗಳ ಕಾರಣ ಮೋದಿ ಅವರ ಎಚ್​ಎಎಲ್ ಭೇಟಿ ಮಹತ್ವ ಪಡೆದಿದೆ.

ಪ್ರಧಾನಿ ಮೋದಿ ಮಾತ್ರವಲ್ಲದೆ, ಈ ಹಿಂದೆಯೂ ಹಲವು ಮಂದಿ ಸಚಿವರು ಹಾಗೂ ರಾಜಕಾರಣಿಗಳು ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ್ದಾರೆ. ವಿವರ ಇಲ್ಲಿದೆ;

ಈ ಹಿಂದೆ ಐಎಎಫ್​ ವಿಮಾನದಲ್ಲಿ ಹಾರಾಟ ಮಾಡಿದ ರಾಜಕಾರಣಿಗಳಿವರು
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್ ಅವರು 2019 ರಲ್ಲಿ ಲಘು ಯುದ್ಧ ವಿಮಾನ (LCA) ತೇಜಸ್​​ನಲ್ಲಿ ಹಾರಾಟ ನಡೆಸಿದ್ದರು. 30 ನಿಮಿಷಗಳ ವಿಹಾರದ ನಂತರ ಅವರು, ‘ಸುಗಮ ಮತ್ತು ಆರಾಮದಾಯಕವಾದ ಹಾರಾಟ’ ನಡೆಸಿದ್ದಾಗಿ ಹೇಳಿದ್ದರು. ನಾವು ವಿಶ್ವದಾದ್ಯಂತ ಯುದ್ಧ ವಿಮಾನಗಳನ್ನು ರಫ್ತು ಮಾಡುವ ಮಟ್ಟವನ್ನು ತಲುಪಿದ್ದೇವೆ ಎನ್ನಲು ಹೆಮ್ಮೆಯಾಗುತ್ತಿದೆ ಎಂದು ಅವರು ಹೇಳಿದ್ದರು.

ನಿರ್ಮಲಾ ಸೀತಾರಾಮನ್
ರಕ್ಷಣಾ ಸಚಿವರಾಗಿದ್ದಾಗ, ನಿರ್ಮಲಾ ಸೀತಾರಾಮನ್ ಅವರು ಜನವರಿ 17, 2018 ರಂದು ರಾಜಸ್ಥಾನದ ಪಶ್ಚಿಮ ವಲಯದಲ್ಲಿ ಸುಖೋಯ್-30 ಎಂಕೆಐನಲ್ಲಿ ಹಾರಾಟ ನಡೆಸಿದ್ದರು. ಪೈಲಟ್‌ನ ಜಿ-ಸೂಟ್ ಧರಿಸಿ ಪೈಲಟ್‌ನ ಹಿಂದಿನ ಸೀಟಿನಲ್ಲಿ ಕುಳಿತ ದೇಶದ ಮೊದಲ ಮಹಿಳಾ ರಕ್ಷಣಾ ಸಚಿವರಾಗಿ ಅವರು ಗುರುತಿಸಿಕೊಂಡರು.

ಕಿರಣ್ ರಿಜಿಜು
ಕೇಂದ್ರ ಸಚಿವ ಕಿರಣ್ ರಿಜಿಜು ಅವರು 2016 ರ ಮೇನಲ್ಲಿ ಸುಖೋಯ್-30 MKI ವಿಮಾನದಲ್ಲಿ ಹಾರಾಟ ನಡೆಸಿದ್ದರು. ಅವರು ಪಂಜಾಬ್‌ನ ಭಾರತೀಯ ವಾಯುಪಡೆಯ ಹಲ್ವಾರಾ ಬೇಸ್‌ನಲ್ಲಿ ಸೂಪರ್‌ಸಾನಿಕ್ ಜೆಟ್‌ನಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿದ್ದರು.

ರಾಜೀವ್ ಪ್ರತಾಪ್ ರೂಡಿ
ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ಅವರು 2015 ರ ಫೆಬ್ರವರಿ 19 ರಂದು ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಸುಖೋಯ್-30 ಎಂಕೆಐನಲ್ಲಿ ಹಾರಾಟ ನಡೆಸಿದ್ದರು.