IND vs AUS Final: ಮೋದಿ ಮೈದಾನದಲ್ಲಿ ಭಾರತ- ಆಸೀಸ್ ದಾಖಲೆ ಹೇಗಿದೆ? ಯಾರದ್ದು ಮೇಲುಗೈ? ಇಲ್ಲಿದೆ ವಿವರ

ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗ್ರ್ಯಾಂಡ್ ಫೈನಲ್ ಪಂದ್ಯ ನಡೆಯಲಿದೆ. ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ವಿಶ್ವ ಕ್ರಿಕೆಟ್​ನ ಮಹತ್ವದ ಪಂದ್ಯಕ್ಕೆ ಸಾಕ್ಷಿಯಾಗಲು ಸಿದ್ಧವಾಗಿದೆ. ಈ ಫೈನಲ್ ಪಂದ್ಯಕ್ಕೂ ಮುನ್ನ ಈ ಮೈದಾನದಲ್ಲಿ ನಡೆದಿದ್ದ 4 ವಿಶ್ವಕಪ್ ಪಂದ್ಯಗಳಲ್ಲಿ ಕೆಲವು ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿವೆ. ಟೀಂ ಇಂಡಿಯಾ ಇಲ್ಲಿ ಆಡಿರುವ ಏಕೈಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ್ದರೆ, ಆಸ್ಟ್ರೇಲಿಯಾ ಕೂಡ ಹಾಲಿ ಚಾಂಪಿಯನ್ ಆಂಗ್ಲರನ್ನು ಮಣಿಸಿತ್ತು. ಹೀಗಾಗಿ ಫೈನಲ್​ ಕಾಳಗಕ್ಕೆ ಸಿದ್ದವಾಗಿರುವ ಎರಡೂ ತಂಡಗಳಿಗೂ ಈ ಮೈದಾನದಲ್ಲಿ ಗೆಲುವಿನ ಸಿಹಿ ಸಿಕ್ಕಿದೆ. ಈ ಎರಡು ಪಂದ್ಯಗಳನ್ನು ಹೊರತುಪಡಿಸಿ, ಈ ಮೈದಾನದಲ್ಲಿ ಉಭಯ ತಂಡಗಳ ಪ್ರದರ್ಶನ ಹೇಗಿದೆ. ಯಾವ ತಂಡಕ್ಕೆ ಮೇಲುಗೈ ಸಿಕ್ಕಿದೆ ಎಂಬುದನ್ನು ನೋಡುವುದಾದರೆ..

ಮೋದಿ ಕ್ರೀಡಾಂಗಣದಲ್ಲಿ ಭಾರತದ ದಾಖಲೆ

ಟೀಂ ಇಂಡಿಯಾ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇದುವರೆಗೆ 19 ಪಂದ್ಯಗಳನ್ನು ಆಡಿದೆ. ಇದರಲ್ಲಿ 11 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದರೆ, 8 ಪಂದ್ಯಗಳಲ್ಲಿ ಸೋಲಿನ ಶಾಕ್ ಎದುರಿಸಿದೆ. ಇನ್ನು ಈ ಮೈದಾನದಲ್ಲಿ ಭಾರತ ಮೂರು ಏಕದಿನ ವಿಶ್ವಕಪ್ ಪಂದ್ಯಗಳನ್ನು ಆಡಿದ್ದು, ಆಡಿರುವ ಅಷ್ಟೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಆಸ್ಟ್ರೇಲಿಯಾದ ದಾಖಲೆ

ಆಸ್ಟ್ರೇಲಿಯಾ ತಂಡ ಕೂಡ ಅಹಮದಾಬಾದ್‌ನಲ್ಲಿ ಇದುವರೆಗೆ ಆರು ಪಂದ್ಯಗಳನ್ನು ಆಡಿದೆ. ಇದರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಆಸೀಸ್ ಎರಡು ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿದೆ. ಹಾಗೆಯೇ ಉಭಯ ತಂಡಗಳು ಈ ಮೈದಾನದಲ್ಲಿ ಇದುವರೆಗ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಟೀಂ ಇಂಡಿಯಾ ಎರಡು ಪಂದ್ಯಗಳಲ್ಲಿ ಗೆದ್ದಿದ್ದರೆ ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಅಂದರೆ ಆಸ್ಟ್ರೇಲಿಯಾ ಏಕೈಕ ಪಂದ್ಯದಲ್ಲಿ ಗೆಲುವು ದಾಖಲಿಸಿದೆ.

ಮೋದಿ ಕ್ರೀಡಾಂಗಣದಲ್ಲಿ ಏಕದಿನ ದಾಖಲೆಗಳು

39 ವರ್ಷಗಳ ಅವಧಿಯಲ್ಲಿ ಅಂದರೆ 1984 ರಿಂದ 2023ರವರೆಗೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 30 ಪಂದ್ಯಗಳು ನಡೆದಿವೆ. ಈ ಪಂದ್ಯಗಳಲ್ಲಿ ಮೊದಲ ಇನಿಂಗ್ಸ್​ನ ಸರಾಸರಿ 243 ಆಗಿದ್ದರೆ, ಈ ಮೈದಾನದ ಅತ್ಯಂತ ಕಡಿಮೆ ಸ್ಕೋರ್ 242 ಆಗಿದೆ. ಹಾಗೆಯೇ ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 15 ಪಂದ್ಯಗಳನ್ನು ಗೆದ್ದಿದ್ದರೆ, ಗುರಿ ಬೆನ್ನಟ್ಟಿರುವ ತಂಡಗಳು ಸಹ 15 ಪಂದ್ಯಗಳನ್ನು ಗೆದ್ದಿವೆ. ಆದರೆ ಟಾಸ್ ಗೆದ್ದ ತಂಡಕ್ಕೆ ಇಲ್ಲಿ ಹೆಚ್ಚಿನ ಲಾಭವಿದ್ದು, ಟಾಸ್ ಗೆದ್ದ ತಂಡಗಳ ಗೆಲುವಿನ ಶೇಕಡವಾರು 56.67% ರಷ್ಟಿದೆ.