ಯಲ್ಲಾಪುರ: ಹಿಂದಿನ ಕಾಲದಲ್ಲಿ ನಾಟಕಗಳು ಗ್ರಾಮೀಣ ಭಾಗದ ಜನಜೀವನದ ಭಾಗವಾಗಿತ್ತು. ಆದರೆ ಈಗಿನ ಯುವಕರಲ್ಲಿ ನಾಟಕಗಳ ಕುರಿತಾದ ಆಸಕ್ತಿ ಕಡಿಮೆಯಾಗುತ್ತಿರುವುದು ವಿಪರ್ಯಾಸ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮೈತ್ರಿ ಕಲಾ ಬಳಗ ತೇಲಂಗಾರ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಟಿ.ವಿ.ಕೋಮಾರ ಬಾಗಿನಕಟ್ಟಾ ಅವರ ನಾಟಕ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃತಿಕಾರ ಟಿ.ವಿ.ಕೋಮಾರ ಮಾತನಾಡಿ, ಕಂಪನಿ ನಾಟಕಗಳಿಂದ ಪ್ರಭಾವಿತನಾಗಿ ನಾಟಕಗಳನ್ನು ಬರೆಯುವುದಕ್ಕೆ ಆರಂಭಿಸಿದೆ. ಸುತ್ತಮುತ್ತಲಿನ ಘಟನೆಗಳನ್ನು ಉತ್ತಮ ಸಂದೇಶದೊAದಿಗೆ ಕಥಾರೂಪಕ್ಕೆ ಇಳಿಸುವ ಪ್ರಯತ್ನ ಮಾಡಿದ್ದೇನೆ ಎಂದರು.
ಕೋಮಾರ ಅವರ ‘ಬಿಳಿ ಆನೆ’ ನಾಟಕವನ್ನು ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ‘ವಿಷ ಸರ್ಪದ ಸಂಚು’ ನಾಟಕವನ್ನು ತಾಲೂಕು ಕಸಾಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಹಾಗೂ ‘ಅದೃಷ್ಟದ ಮುಖ’ ನಾಟಕವನ್ನು ಚಿಂತಕ ಕಾಶ್ಯಪ ಪರ್ಣಕುಟಿ ಲೋಕಾರ್ಪಣೆಗೊಳಿಸಿದರು. ಪ್ರೀತಿ ಶಶಾಂಕ, ಡಾ.ಡಿ.ಕೆ.ಗಾಂವ್ಕಾರ ಹಾಗೂ ಸುಬ್ರಾಯ ಬಿದ್ರೆಮನೆ ಕೃತಿಗಳನ್ನು ಪರಿಚಯಿಸಿದರು. ತೇಲಂಗಾರ ಮೈತ್ರಿ ಕಲಾ ಬಳಗದ ವತಿಯಿಂದ ಟಿ.ವಿ.ಕೋಮಾರ ಹಾಗೂ ಶ್ರೀಮತಿ ಕೋಮಾರ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಕ.ಸಾ.ಪ ಅಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆ ವಹಿಸಿದ್ದರು. ಟಿ.ಎಸ್.ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಪಾಠಶಾಲೆಯ ಅಧ್ಯಕ್ಷ ಉಮೇಶ ಭಾಗ್ವತ ಇತರರಿದ್ದರು.