ನವದೆಹಲಿ: ಪ್ರವಾಹದಿಂದ ಉಂಟಾದ ನಷ್ಟಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಪಂಜಾಬ್ ನಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ಚಂಡೀಗಢದ ಸೆಕ್ಟರ್ 17 ಪರೇಡ್ ಮೈದಾನದಲ್ಲಿ ರೈತರು ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದು, ಗಡಿಗಳಲ್ಲಿ ಭದ್ರತೆ ಹೆಚ್ಚಿಸಲಾಗುತ್ತಿದೆ.
ಪಂಜಾಬ್ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಿಂದ ಚಂಡೀಗಢಕ್ಕೆ ತೆರಳುತ್ತಿರುವ ಹಿನ್ನೆಲೆ ಸೋಮವಾರ ಪಂಜಾಬ್‍ನ ವಿವಿಧ ಭಾಗಗಳಲ್ಲಿ ತಮ್ಮ ಹಲವಾರು ಮುಖಂಡರನ್ನು, ಕೆಲವು ರೈತರನ್ನು ಹರಿಯಾಣದ ಅಂಬಾಲಾ ಮತ್ತು ಕುರುಕ್ಷೇತ್ರದಲ್ಲಿ ಬಂಧಿಸಲಾಯಿತು ಎಂದು ರೈತರು ಹೇಳಿಕೊಂಡಿದ್ದಾರೆ.
ಚಂಡೀಗಢದಲ್ಲಿ, ರೈತರು ನಗರಕ್ಕೆ ಪ್ರವೇಶಿಸುವುದನ್ನು ತಡೆಯಲು ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರೈತ ಮುಖಂಡರನ್ನು ಬಂಧನಕ್ಕೆ ಪ್ರಯತ್ನಿಸಿದಾಗ ರೈತರು ಮತ್ತು ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಸಂಗ್ರೂರ್ ಜಿಲ್ಲೆಯಲ್ಲಿ ಟ್ರಾಕ್ಟರ್-ಟ್ರಾಲಿಯಿಂದ ಒಬ್ಬ ರೈತ ಸಾವನ್ನಪ್ಪಿದ್ದಾನೆ ಮತ್ತು ಕನಿಷ್ಠ ಐವರು ಪೊಲೀಸರು ಗಾಯಗೊಂಡಿದ್ದಾರೆ.ಪಂಜಾಬ್ ಸೇರಿದಂತೆ ಇಡೀ ಉತ್ತರ ಭಾರತದಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಗೆ ಕೇಂದ್ರದಿಂದ 50,000 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಅನ್ನು ರೈತರು ಒತ್ತಾಯಿಸುತ್ತಿದ್ದಾರೆ. ಬೆಳೆ ನಷ್ಟಕ್ಕೆ ಎಕರೆಗೆ 50 ಸಾವಿರ, ಹಾನಿಗೀಡಾದ ಮನೆಗೆ 5 ಲಕ್ಷ ಹಾಗೂ ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ, ಭಾರತಿ ಕಿಸಾನ್ ಯೂನಿಯನ್ (ಕಾರಂತಿ ಕರಿ), ಬಿಕೆಯು (ಏಕ್ತಾ ಆಜಾದ್), ಆಜಾದ್ ಕಿಸಾನ್ ಸಮಿತಿ, ದೋಬಾ, ಬಿಕೆಯು (ಬೆಹ್ರಾಮ್‍ಕೆ) ಮತ್ತು ಭೂಮಿ ಬಚಾವೋ ಮೋಹಿಮ್ ಸೇರಿದಂತೆ 16 ಕೃಷಿ ಸಂಸ್ಥೆಗಳು ಪ್ರತಿಭಟನೆಗೆ ಕರೆ ನೀಡಿವೆ.