ಚಂದ್ರಯಾನ-3ಗೆ ಸ್ವಾಗತ ಕೋರಿದ ಚಂದ್ರಯಾನ-2 ಆರ್ಬಿಟರ್‌; ಇಸ್ರೋಗೆ ಇನ್ನಷ್ಟು ತಾಂತ್ರಿಕ ಬಲ

ಬೆಂಗಳೂರು: ಚಂದ್ರಯಾನ-3 ಸಕ್ಸಸ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಚಂದ್ರಯಾನ-3 ರಲ್ಲಿ ಕಳುಹಿಸಿರುವ ವಿಕ್ರಮ್‌ ಲ್ಯಾಂಡರ್, ಚಂದ್ರಯಾನ-2 ನಲ್ಲಿ ಕಳುಹಿಸಿದ್ದ ಆರ್ಬಿಟರ್ ಸಂಪರ್ಕ ಸಾಧಿಸಿದೆ. ಚಂದ್ರಯಾನ-2 ಆರ್ಬಿಟರ್‌ನೊಂದಿಗೆ ಸಂಪರ್ಕ ಸಾಧಿಸಿರುವ ಮಾಹಿತಿಯನ್ನು ಇಸ್ರೋ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. 2019ರಲ್ಲಿ  ಇಸ್ರೋ (ISRO) ಚಂದ್ರಯಾನ-2 ಯೋಜನೆ ಆರಂಭಿಸಿದಾಗ ಅದರ ಆರ್ಬಿಟರ್‌ ಅನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಲಾಗಿತ್ತು. ಆದರೆ, ಇದರ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲು ವಿಫಲವಾಗಿದ್ದರಿಂದ ಸಂವಹನ ಕಡಿತಗೊಂಡಿತ್ತು. ಕಳೆದ 5 ವರ್ಷಗಳಿಂದ ಏಕಾಂಗಿಯಾಗಿ ಚಂದ್ರನ ಕಕ್ಷೆ ಸುತ್ತುತ್ತಿದ್ದ ಈ ಆರ್ಬಿಟರ್ ವಿಕ್ರಮ್‌ ಲ್ಯಾಂಡರ್‌ನ (Vikram Lander) ಸಂಪರ್ಕ ಸಿಕ್ಕಿದೆ. ಕಳೆದ ಬಾರಿ ಕಳುಹಿಸಿದ್ದ ಆರ್ಬಿಟರ್ ಸುಸ್ಥಿತಿಯಲ್ಲಿದ್ದ ಕಾರಣ ಈ ಬಾರಿ ಕೇವಲ ಲ್ಯಾಂಡರ್‌ ಮತ್ತು ರೋವರ್ ಅನ್ನು ಕಳುಹಿಸಿತ್ತು. ಈ ಎರಡರ ಸಂಪರ್ಕ ಇಸ್ರೋಗೆ ತಾಂತ್ರಿಕ ಬಲ ಸಿಕ್ಕಾಂತಾಗಿದೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಇಸ್ರೋ ಚಂದ್ರಯಾನ-3 ನೌಕೆಯ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಈ ಪ್ರಕ್ರಿಯೆ ಯಶಸ್ವಿಯಾದರೆ ಚಂದ್ರನ ಮೇಲೆ ಲ್ಯಾಂಡರ್‌ ಇಳಿಸಿದ ಜಗತ್ತಿನ 4ನೇ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.ಇನ್ನೂ ತೀವ್ರ ಕುತೂಹಲ ಮೂಡಿಸಿರುವ ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇದಕ್ಕೂ ಮೊದಲೇ ಚಂದ್ರಯಾನ-3 ಗಗನನೌಕೆಯು ಚಂದ್ರನ ಸನಿಹದಿಂದ ಫೋಟೋಗಳನ್ನು ಕ್ಲಿಕ್ಕಿಸಿ ಇಸ್ರೋಗೆ ಕಳಿಹಿಸಿಕೊಟ್ಟಿದೆ. ಈ ಫೋಟೋಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಈ ಫೋಟೋದಲ್ಲಿ ಭೂಮಿಗೆ ಕಾಣಿಸದ ಚಂದ್ರನ ಮತ್ತೊಂದು ಮುಖ ಕಾಣಿಸಿದೆ. ಚಂದ್ರನ ಮಗ್ಗುಲಿನಲ್ಲಿ ಸಾಕಷ್ಟು ಕುಳಿಗಳು ಇರುವುದು ಫೋಟೋದಲ್ಲಿ ಕಂಡು ಬಂದಿದೆ.ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಆಂಡ್‌ ಅವಾಯಿಡೆನ್ಸ್ ಕ್ಯಾಮೆರಾ ಮೂಲಕ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಆಂಡ್‌ ಅವಾಯಿಡೆನ್ಸ್ ಕ್ಯಾಮೆರಾ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನ ಪತ್ತೆಹಚ್ಚಲು ನೆರವಾಗಲಿದೆ. ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಸ್ಥಳದಲ್ಲಿ ಇಳಿಯಲು ಇದು ನೆರವಾಗಲಿದೆ.ವಿಕ್ರಮ್ ಸೆರೆ ಹಿಡಿದ ಫೋಟೋಗಳಲ್ಲಿ ಹೈನ್‌, ಬಾಸ್‌ ಎಲ್‌, ಮಾರ್‌ ಹಬ್ಲೊಲ್ಡಿಟಿನಿಯಮ್‌ ಮತ್ತು ಬೆಲ್‌ಕೊವಿಚ್‌ ಎಂಬ ಕುಳಿಗಳನ್ನ ಗುರುತಿಸಲಾಗಿದೆ. ಭೂಮಿಗೆ ಕಾಣಿಸದ ಚಂದ್ರನ ಭಾಗವು ಗೋಳಾರ್ಧವಾಗಿದೆ. ಚಂದ್ರನ ಕಕ್ಷೆಯಲ್ಲಿ ಸಿಂಕ್ರೊನಸ್‌ ಆಗಿ ತಿರುಗುವಿಕೆಯಿಂದಾಗಿ ಈ ಭಾಗ ಭೂಮಿಗೆ ಕಾಣಿಸುವುದೇ ಇಲ್ಲ. ಇದೀಗ ಇಸ್ರೋದ ಕ್ಯಾಮೆರಾವು ಆ ಭಾಗದ ಚಿತ್ರಗಳನ್ನು ತೆಗೆದಿದೆ.‌