ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಅಂತಿಮ ಎರಡನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇಂದು ಕೊನೆಯ ದಿನದಾಟ ಮಾತ್ರ ಬಾಕಿ ಉಳಿದಿದ್ದು ಕೆರಿಬಿಯನ್ನರ ಗೆಲುವಿಗೆ 289 ರನ್ಗಳ ಅವಶ್ಯಕತೆಯಿದ್ದರೆ, ಭಾರತದ ಜಯಕ್ಕೆ ವಿಂಡೀಸ್ನ 8 ವಿಕೆಟ್ಗಳು ಕೀಳಬೇಕಿದೆ. ಮೊದಲ ಇನ್ನಿಂಗ್ಸ್ನಲ್ಲಿ ವಿಂಡೀಸ್ ತಂಡವನ್ನು 255 ರನ್ಗಳಿಗೆ ಆಲೌಟ್ ಮಾಡಿ ತನ್ನ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ನಡೆಸಿತು. ಅದರಲ್ಲೂ ಇಶಾನ್ ಕಿಶನ್ ಟಿ20 ಮಾದರಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 34 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ನಿಂದ ಅಜೇಯ 52 ರನ್ ಚಚ್ಚಿದರು.
ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಕಿಶನ್ ಅವರು ವಿರಾಟ್ ಕೊಹ್ಲಿ ಅವರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದು ವಿಶೇಷ. ಟೆಸ್ಟ್ ಕ್ರಿಕೆಟ್ನಲ್ಲಿ ಕೊಹ್ಲಿಯದ್ದು ನಾಲ್ಕನೇ ಕ್ರಮಾಂಕ. ಈ ಸ್ಥಾನವನ್ನು ಅವರು ಯಾರಿಗೂ ಬಿಟ್ಟುಕೊಡುವುದಿಲ್ಲ. ಆದರೆ, ಈ ಬಾರಿ ತಂಡದ ಹಿತಕ್ಕಾಗಿ ಕೊಹ್ಲಿ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಕಿಶನ್ಗೆ ತ್ಯಾಗ ಮಾಡಿದರು. ಈ ಬಗ್ಗೆ ಪಂದ್ಯ ಮುಗಿದ ಬಳಿಕ ಇಶಾನ್ ಕಿಶನ್ ಮಾಹಿತಿ ನೀಡಿದ್ದಾರೆ.