ಉಚಿತ ಬಸ್​​ ಪ್ರಯಾಣದ ಶಕ್ತಿ ಯೋಜನೆ ಸೈಡ್ ಎಫೆಕ್ಟ್, ರೈಲ್ವೆ ಇಲಾಖೆಗೂ ನಿಶ್ಯಕ್ತಿ! ದಿನೇ ದಿನೇ ರೈಲ್ವೆ ಪ್ರಯಾಣಿಕರ ಸಂಖ್ಯೆ ಕಡಿಮೆ

ಹುಬ್ಬಳ್ಳಿ, ಜುಲೈ 22: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆಗೆ ದೊಡ್ಡ ಹೊಡೆತ ಬಿದ್ದಿದೆ. ಅದರಲ್ಲೂ ಆಟೋ ಚಾಲಕರ ಗೋಳು ಹೇಳತೀರದು. ಆಟೋ ಚಾಲಕರು ದುಡಿಮೆ ‌ಇಲ್ಲದೆ ಕಂಗಾಲಾಗಿದ್ದಾರೆ. ಇತ್ತ ಸರ್ಕಾರಿ ಬಸ್ ಗಳ ತುಂಬಾ ಮಹಿಳಾಮಣಿಗಳದ್ದೇ ದರ್ಬಾರಾಗಿದೆ. ಉಚಿತ ಪ್ರಯಾಣದ ಎಫೆಕ್ಟ್ ಇದೀಗ ರೈಲ್ವೆ ಇಲಾಖೆಗೂ ಹೊಡೆತ ಬಿದ್ದಿದೆ. ಶಕ್ತಿ ಯೋಜನೆ ಆರಂಭವಾಗಿ ಕೆಲವು ದಿನಗಳ ಕಳೆದಿದ್ದು, ಈ ನಡುವೆ ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ 10ರಿಂದ 20% ಕಡಿಮೆಯಾಗಿದೆ..

ಕಳೆದು ತಿಂಗಳು ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿದೆ. ಒಂದು ತಿಂಗಳಾದರೂ ಮಹಿಳಾ ಮಣಿಗಳ ಉತ್ಸಾಹ ಕಡಿಮೆ ಆಗಿಲ್ಲ. ಬಸ್ ನಲ್ಲಿ ಫುಲ್ ಮಹಿಳಾ ಮಣಿಗಳದ್ದೇ ದರ್ಬಾರು. ತಂಡೋಪ ತಂಡವಾಗಿ ದೇವರ ದರ್ಶನಕ್ಕೆ ಹೊರಟಿದ್ದಾರೆ. ಅಷ್ಟರ ಮಟ್ಟಿಗೆ ಉಚಿತ ಪ್ರಯಾಣದ ಲಾಭ ಪಡೆಯುತ್ತಿದ್ದಾರೆ. ಆದ್ರೆ ಇದರ ಸೈಡ್ ಎಫೆಕ್ಟ್ ಕೂಡಾ ಜಾಸ್ತಿಯಾಗಿದೆ. ಎಸ್! ಶಕ್ತಿ ಯೋಜನೆಯಿಂದ ನೈಋತ್ಯ ರೈಲ್ವೆ ವಲಯದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯ ಅಂದಾಜಿನ ಪ್ರಕಾರ 10 % ಪ್ರಯಾಣಿಕರ ಸಂಖ್ಯೆ ಕುಸಿದಿದ್ದು, ರೈಲ್ವೆ ಇಲಾಖೆಗೆ ಹೊಡೆತ ಬಿದ್ದಂತಾಗಿದೆ.

ಮಹಿಳೆಯರಿಗೆ ಸರ್ಕಾರ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿರುವ ಬೆನ್ನಲ್ಲೇ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಬಹುತೇಕ ಕಡಿಮೆಯಾಗಿದ್ದು, ಮಹಿಳೆಯರು ರೈಲ್ವೆ ಬಿಟ್ಟು ಬಸ್ಸಿನಲ್ಲಿ ಪ್ರಯಾಣ ಮಾಡಲು ಮುಂದಾಗಿದ್ದಾರೆ. ಖಾಸಗಿ ಹಾಗೂ ಆಟೋ ಸೇವೆಗೆ ಆರ್ಥಿಕ ಸಂಕಷ್ಟ ಎದುರಾಗಿರುವ ಬೆನ್ನಲ್ಲೇ ಈಗ ರೈಲ್ವೆ ಇಲಾಖೆಯಲ್ಲಿಯೂ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ರೈಲ್ವೆ ಅಧಿಕಾರಿಗಳು 10 ದಿನದ ಸರ್ವೆ ಮಾಡಿಸಿದ್ದು ಇದರಲ್ಲಿ ಶೇಕಡಾ 10 ರಿಂದ 20 ರಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ಅನೀಶ್ ಹೆಗಡೆ, ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನಿಡಿದ್ದಾರೆ

ಇನ್ನು ನೈಋತ್ಯ ರೈಲ್ವೆ ಇಲಾಖೆಯಲ್ಲಿ ಕೋವಿಡ್ ನಂತರದಲ್ಲಿ ಇಂತಹದೊಂದು ಆರ್ಥಿಕ ಸಮಸ್ಯೆ ಎದುರಾಗುವ ಭೀತಿ ಸ್ಪಷ್ಟವಾಗಿ ಗೋಚರಿಸುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಈಗಾಗಲೇ 10 ದಿನಗಳ ಅವಧಿಯಲ್ಲಿ ಲೆಕ್ಕಾಚಾರ ಮಾಡಲಾಗಿದ್ದು, 10 % ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಮೂರು ತಿಂಗಳ ಅಂಕಿಅಂಶಗಳ ಪ್ರಕಾರ ಎಷ್ಟರಮಟ್ಟಿಗೆ ಆರ್ಥಿಕ ಹೊರೆಯಾಗಲಿದೆ ಎಂಬುವುದನ್ನು ನೈಋತ್ಯ ರೈಲ್ವೆ ಇಲಾಖೆ ಶೀಘ್ರವೇ ಬಿಡುಗಡೆ ಮಾಡಲಿದೆ.

ಶಕ್ತಿ ಯೋಜನೆಯಿಂದ ಖಾಸಗಿ ವಾಹನ‌ ಮಾಲೀಕರು ಅಕ್ಷರಶಃ ಕಂಗಾಲಾಗಿದ್ದಾರೆ. ಅದರಲ್ಲೂ ಆಟೋ ಚಾಲಕರು ಅಟೋ ಮಾರೋದಕ್ಕೂ ಮುಂದಾಗಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಯಾದ ಬಳಿಕ‌ ಆಟೋ ಡ್ರೈವರ್ ಗಳಿಗೆ ಕೆಲಸ ಇಲ್ಲವಾಗಿದೆ. ಇದೀಗ ಅದೇ ರೀತಿಯ ಬಿಸಿ ರೈಲ್ವೆ ಇಲಾಖೆಗೆ ತಟ್ಟಿದೆ. ರೈಲ್ವೆ ಇಲಾಖೆ 10 ದಿನಗಳ ಪ್ರಾಯೋಗಿಕ ಪ್ರಯಾಣಿಕರ ಸರ್ವೆ ಮಾಡಿಸಿದ್ದು ಅದರಲ್ಲಿ ಶೇಕಡಾ 10 ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಇದಕ್ಕೆ ಬಹುತೇಕ ಶಕ್ತಿ ಯೋಜನೆಯೆ ಕಾರಣ ಎನ್ನಲಾಗಿದೆ.

ಆದ್ರೆ ಮೂರು ತಿಂಗಳ ಬಳಿಕ ಸರಿಯಾದ ಅಂಕಿ ಅಂಶ ಸಿಗಲಿದೆ ಅನ್ನೋದು ರೈಲ್ವೆ ಅಧಿಕಾರಿಗಳ ಮಾತು. ಆದ್ರೆ ಇತ್ತ ಸರ್ಕಾರಿ ಬಸ್ ನಲ್ಲಿ ಯೋಜನೆ ಜಾರಿಯಾದ ಬಳಿಕ ವಾಯವ್ಯ ಕರ್ನಾಟಕ ಸಾರಿಗೆ ವ್ಯಾಪ್ತಿಯಲ್ಲಿ ಹೆಚ್ಚು ಕಡಿಮೆ ಐದು ಕೋಟಿ ಜನ ಮಹಿಳಾ ಮಣಿಗಳು ಪ್ರಯಾಣ ಮಾಡಿದ್ದಾರೆ ಎಂದು ಭರತ್, ತಾಂತ್ರಿಕ ನಿರ್ದೇಶಕರು, ವಾಯವ್ಯ ಸಾರಿಗೆ, ಹುಬ್ಬಳ್ಳಿ ತಿಳಿಸಿದ್ದಾರೆ. ಒಟ್ಟಿನಲ್ಲಿ ರೈಲ್ವೆ ಇಲಾಖೆಯಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗುತ್ತಿರುವುದು ನಿಜಕ್ಕೂ ರೈಲ್ವೆ ವ್ಯವಸ್ಥೆಗೆ ಸಂಕಷ್ಟ ತಂದೊಡ್ಡುವ ಭೀತಿ ಎದುರಾಗಲಿದೆ.