ಬೆಂಗಳೂರು, (ಜುಲೈ 15): ಮನೆ ಯಜಮಾನಿಗೆ 2000 ರೂ. ನೀಡುವ ಕಾಂಗ್ರೆಸ್ ಸರ್ಕಾರದ ಮತ್ತೊಂದು ಗ್ಯಾರಂಟಿಯಾಗಿರುವ ಗೃಹ ಲಕ್ಷ್ಮೀ ಯೋಜನೆಗೆ ಜುಲೈ 17 ಅಥವಾ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ. ಇಂದು (ಜುಲೈ 15) ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ‘ಗೃಹಲಕ್ಷ್ಮೀ’ಗೆ ಚಾಲನೆ ನೀಡಲು ರಾಷ್ಟ್ರೀಯ ನಾಯಕರಿಗೆ ಆಹ್ವಾನ ನೀಡಲಾಗಿದೆ. ಈ ಸಂಬಂಧ ರಾಷ್ಟ್ರೀಯ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಆಗಸ್ಟ್ 16 ಅಥವಾ 17ರಂದು ಯಜಮಾನಿ ಖಾತೆಗೆ 2000 ರೂ. ಹಣ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.
ಫಲಾನುಭವಿಗಳ ನೋಂದಣಿ ಜುಲೈ 17 ಅಥವಾ ಜುಲೈ 19 ರಿಂದ ಆರಂಭವಾಗಲಿದೆ. ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆ ಯೋಜನೆಯ ಫಲಾನುಭವಿಯಾಗಿರುತ್ತಾರೆ. ಫಲಾನುಭವಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್ಟಿ ಪಾವತಿದಾರರಾಗಿರತಕ್ಕದ್ದಲ್ಲ. ರೇಷನ್ ಕಾರ್ಡ್ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಮತ್ತು ನೋಂದಣಿ ಸ್ಥಳದ ವಿವರ ಎಸ್ಎಂಎಸ್ ಮೂಲಕ ರವಾನೆ ಮಾಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ವನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿಗೆ ಅವಕಾಶ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
‘ಗೃಹಲಕ್ಷ್ಮೀ’ಯೋಜನೆಗೆ ನೋಂದಣಿಗೆ ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆಯ ಪಾಸ್ ಬುಕ್ ಅಗತ್ಯ. ಒಂದು ವೇಳೆ ಆಧಾರ್ ನಂಬರ್ ಜೋಡಣೆಯಾಗಿರುವ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಬಯಸಿದಲ್ಲಿ ಆ ಖಾತೆಯ ಪಾಸ್ ಬುಕ್ ಅಗತ್ಯ. ಗ್ರಾಮ ವನ್, ಬಾಪೂಜಿ ಕೇಂದ್ರ, ಕರ್ನಾಟಕ ವನ್, ಬೆಂಗಳೂರು ವನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಾಗ ಮಂಜೂರಾತಿ ಪತ್ರ ನೀಡಲಾಗುತ್ತದೆ. ಪ್ರಜಾಪ್ರತಿನಿಧಿ ಮೂಲಕ ನೊಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರ ಮನೆಗೆ ತಲುಪಿಸಲಾಗುವುದು. ಅರ್ಜಿದಾರರು ನೀಡಿದ ಮೊಬೈಲ್ ಸಂಖ್ಯೆಗೆ ಎಸ್ ಎಂಎಸ್ ಮೂಲಕ ಮಂಜೂರಾತಿ ಸಂದೇಶ ರವಾನೆ ಮಾಡಲಾಗುತ್ತದೆ. ಫಲಾನುಭವಿಯ ಆಧಾರ್ ಜೋಡಣೆಯಾಗಿರುವ ಖಾತೆಗೆ ಡಿಬಿಟಿ ಮೂಲಕ ಹಣ ಜಮೆ ಮಾಡುತ್ತೇವೆ. ಬೇರೆ ಖಾತೆಗೆ ಆರ್ ಟಿಜಿಎಸ್ ಮೂಲಕ ಹಣ ಜಮೆ ಮಾಡಲಾಗುತ್ತದೆ. ನೋಂದಣಿಗೆ ಯಾವುದೇ ಶುಲ್ಕ, ಯಾವುದೇ ಅಂತಿಮ ದಿನಾಂಕ ಮತ್ತು ಸಮಯ ನಿಗದಿಪಡಿಸಿಲ್ಲ ಎಂದು ಹೇಳಿದರು.
ಫಲಾನುಭವಿಯು ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿಗೆ 1902 ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಎಸ್ ಎಂಎಸ್ ಮೂಲಕ ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದು. ನಿಗದಿಪಡಿಸಿದ ದಿನಾಂಕದಂದು ನೋಂದಣಿಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಸೋನಿಯಾ ಗಾಂಧಿಯವರನ್ನು ಸಂಪರ್ಕ ಮಾಡಿದ್ದೇವೆ, ಸಿಎಂ ಕೂಡಾ ಪತ್ರ ಬರೆದಿದ್ದಾರೆ. ರಾಷ್ಟ್ರೀಯ ನಾಯಕರ ಸಮಯ ಸಿಕ್ಕಿದರೆ ಜುಲೈ 17 ಸಂಜೆ 5 ಗಂಟೆಗೆ ಯೋಜನೆ ಪ್ರಾರಂಭವಾಗುತ್ತದೆ. ಇಲ್ಲದಿದ್ದಲ್ಲಿ ಜುಲೈ 19 ರಂದು ಮುಖ್ಯಮಂತ್ರಿಗಳಿಂದ ಚಾಲನೆ ಸಿಗಲಿದೆ ಎಂದು ತಿಳಿಸಿದರು.