ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಇದಕ್ಕಾಗಿ ಇಸ್ರೋ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇಂದು (ಜುಲೈ 14) ಮಧ್ಯಾಹ್ನ 2:35ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆ ಆಗಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ದೇಶವೇ ಕಾದುಕುಳಿತಿದೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಿಜ್ಞಾನಿ ಡಾ. ಪಿ. ವೀರಾ ಮುತ್ತುವೆಲ್ ಅವರು ಚಂದ್ರಯಾನ-3 ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಂದ್ರಯಾನ 3 ಬಾಹ್ಯಾಕಾಶ ನೌಕೆಯ ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಇವರು ಈ ಯೋಜನೆಯ ಮಾಸ್ಟರ್ ಮೈಂಡ್. ಡಾ. ಪಿ. ವೀರಾ ಮುತ್ತುವೆಲ್ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
ಆರಂಭಿಕ ಜೀವನ:
ಡಾ. ಪಿ. ವೀರಾ ಮುತ್ತುವೆಲ್ ಅವರು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಜನಿಸಿದರು. ಇವರ ತಂದೆ ಪಳನಿವೇಲ್ ದಕ್ಷಿಣ ರೈಲ್ವೆಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ವಿಲ್ಲುಪುರಂನ ರೈಲ್ವೆ ಸ್ಕೂಲ್ನಲ್ಲಿ ವಿಧ್ಯಾಭ್ಯಾಸ ಮಾಡಿದ ನಂತರ ಖಾಸಗಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದರು. ಆದರೆ, ಬಾಹ್ಯಾಕಾಶದ ಮೇಲಿನ ಆಸಕ್ತಿ ಮತ್ತು ಆ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಇವರಲ್ಲಿತ್ತು. ಹೀಗಾಗಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೆಲಸವನ್ನು ತೊರೆದು ತಾನು ಅಂದುಕೊಂಡಿದ್ದನ್ನು ಸಾಧಿಸಲು ತಾಂಬರಂನ ಖಾಸಗಿ ಕಾಲೇಜಿನಲ್ಲಿ ಸೇರಿಕೊಂಡರು. ನಂತರ ಉನ್ನತ ವ್ಯಾಸಂಗಕ್ಕಾಗಿ ಐಐಟಿ ಚೆನ್ನೈಗೆ ಸೇರಿಕೊಂಡು ಏರೋಸ್ಪೇಸ್ ಕ್ಷೇತ್ರದಲ್ಲಿ ಪ್ರಮುಖ ಸಂಶೋಧನೆಗಳನ್ನು ನಡೆಸಿದರು.
ಇಸ್ರೋದಲ್ಲಿ ಪಯಣ:
ಹಾರ್ಡ್‌ವೇರ್ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ವೀರ ಮುತ್ತುವೇಲ್ ಅವರಿಗೆ 1989 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದಲ್ಲಿ ವಿಜ್ಞಾನಿಯಾಗುವ ಅವಕಾಶ ಒದಗಿಬಂತು. ಚಿನ್ನದಂತಹ ಅವಕಾಶವನ್ನು ಕೈಬಿಡದ ಮುತ್ತುವೇಲ್ ಇಸ್ರೋ ಸೇರಿದರು. ನಂತರ ಬಂದ ಅವಕಾಶಗಳನ್ನು ಹಿಂತಿರುಗಿ ನೋಡಲೇ ಇಲ್ಲ. ದೇಶ ಮತ್ತು ವಿದೇಶದ ಅನೇಕ ಸಂಸ್ಥೆಗಳ ಜೊತೆಗೆ ಇಸ್ರೋದಲ್ಲಿ ಕೆಲಸ ಮಾಡುವ ಕನಸನ್ನು ನನಸು ಮಾಡಿಕೊಂಡರು.
ಮೆಚ್ಚುಗೆ ಪಡೆದ ಸಂಶೋಧನೆ:
2016 ರಲ್ಲಿ, ಬಾಹ್ಯಾಕಾಶ ನೌಕೆಯ ಎಲೆಕ್ಟ್ರಾನಿಕ್ ಪ್ಯಾಕೇಜ್‌ನಲ್ಲಿ ಕಂಪನ ನಿಯಂತ್ರಣ ವ್ಯವಸ್ಥೆಯ ಕುರಿತು ಸಂಶೋಧನಾ ಪ್ರಬಂಧವನ್ನು ಸಲ್ಲಿಸಿದರು. ಅಷ್ಟೇ ಅಲ್ಲದೆ ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಇದಕ್ಕೆ ಸಂಬಂಧಿಸಿದಂತೆ ಪ್ರಯೋಗಗಳನ್ನು ನಡೆಸಲಾಯಿತು. ಇದರಿಂದ ಬಾಹ್ಯಾಕಾಶ ನೌಕೆಯ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸಲು ಮತ್ತು ಬಾಹ್ಯಾಕಾಶ ನೌಕೆಯ ರೋವರ್ ಭಾಗಕ್ಕೆ ಶಕ್ತಿ ತುಂಬಲು ಸಹಾಯ ಮಾಡುತ್ತದೆ ಎಂಬುದು ತಿಳಿಯಿತು. ಈ ಸಂಶೋಧನಾ ಪ್ರಬಂಧವನ್ನು ನೋಡಿ ಅಚ್ಚರಿಗೊಂಡ ಇಸ್ರೋ ವೀರ ಮುತ್ತುವೇಲ್ ಅವರನ್ನು ಪ್ರಶಂಸೆಯ ಸುರಿಮಳೆಗೈದಿದೆ.
ಚಂದ್ರಯಾನ 3 ಯೋಜನೆಯ ನಿರ್ದೇಶಕ:
ಇಸ್ರೋದಲ್ಲಿ ಅನೇಕ ಯೋಜನೆಗಳು ಮತ್ತು ವಿವಿಧ ಜವಾಬ್ದಾರಿಗಳಲ್ಲಿ ಕೆಲಸ ಮಾಡಿದ 30 ವರ್ಷಗಳ ಅನುಭವದ ನಂತರ, ವಿಜ್ಞಾನಿ ಕವಿತಾ ಅವರ ಬದಲಿಗೆ 2019 ರಲ್ಲಿ ವೀರ ಮುತ್ತುವೇಲ್ ಅವರನ್ನು ಚಂದ್ರಯಾನ 3 ರ ನಿರ್ದೇಶಕರಾಗಿ ನೇಮಿಸಲಾಯಿತು.