ಹಾಸನ: ಹಾಸನ ಸುತ್ತಮುತ್ತ ಧಾರಕಾರ ಮಳೆ ಸುರಿದಿದೆ. ಹಳೇಬೀಡು ಮತ್ತು ಹೊಳೆನರಸೀಪುರ ಪಟ್ಟಣಗಳಲ್ಲಿ ಉತ್ತಮ ಮಳೆಯಾಗಿದ್ದು ಭಾರೀ ಮಳೆಯಿಂದ ದುರಂತವೊಂದು ಸಂಭವಿಸಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮಹಿಳೆ ಹಾಗೂ ಹಸು ಸಾವನ್ನಪ್ಪಿದೆ. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಬೇಜವಾಬ್ದಾರಿ ತೋರಿರುವ ಚೆಸ್ಕಾಂ ಸಿಬ್ಬಂದಿ ಅಮಾನತು ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ನಿನ್ನೆ(ಜುಲೈ 07) ಸಂಜೆ ಹಸು ಮೇಯಿಸಿಕೊಂಡು ಬರುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರಂಗಮ್ಮ (60) ಹಾಗೂ ಹಸು ಮೃತಪಟ್ಟಿದ್ದರು. ನಿನ್ನೆ ಸಂಜೆಯಿಂದ ಮೃತ ಮಹಿಳೆ ಶವ ಮೇಲೆತ್ತಲು ಬಿಡದೆ ಘಟನೆ ನಡೆದ ಸ್ಥಳದಲ್ಲೇ ಪ್ರತಿಭಟನೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಸ್ಥಳೀಯ ಶಾಸಕ ಹೆಚ್.ಕೆ.ಸುರೇಶ್ ಭೇಟಿ ನೀಡಿದ್ದು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸುತ್ತಿದ್ದಾರೆ. ಆದ್ರೆ ಪ್ರತಿಭಟನಾಕಾರರು ಶಾಸಕರ ಮನವೊಲಿಕೆಗೆ ಕ್ಯಾರೆ ಎನ್ನುತ್ತಿಲ್ಲ. ತಮ್ಮ ಬೇಡಿಕೆ ಈಡೇರಿಸುವವರೆಗೂ ಶವ ಮೇಲೆತ್ತಲು ಬಿಡಲ್ಲ ಎಂದು ಪಟ್ಟುಹಿಡಿದಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.