ಬೆಂಗಳೂರು: ಆದಾಯ ಹೆಚ್ಚಿಸಲು ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಅನ್ನಭಾಗ್ಯ ಅಕ್ಕಿಗೆ ನೀಡುವ ಹಣ ಅಬಕಾರಿ ಇಲಾಖೆಗೆ ಹೋಗುತ್ತೆ. ಆ ಅನ್ನಭಾಗ್ಯದ ಹಣವನ್ನು ತೆಗೆದುಕೊಂಡು ಮನೆಗೆ ಹೋಗುತ್ತಾನೋ, ಇನ್ನೆಲ್ಲಿಗೆ ಹೋಗುತ್ತಾನೋ ನನಗೆ ಗೊತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ. ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ನಲ್ಲಿ ವಿಶೇಷತೆ ಏನಿಲ್ಲ ಎಂದಿದ್ದಾರೆ.
ಬಜೆಟ್ಗಳ ಅಧ್ಯಯನ ಮಾಡಿದ್ದೇನೆ ಎಂದ ಹೆಚ್.ಡಿ ಕುಮಾರಸ್ವಾಮಿ
ಒಂದೇ ವರ್ಷಕ್ಕೆ ಜನರ ಮೇಲೆ 85,000 ಕೋಟಿ ಸಾಲ ಹೇರುತ್ತಿದ್ದಾರೆ. 1995ರಿಂದ ಈವರೆಗೆ ಸಿದ್ದರಾಮಯ್ಯ ಮಂಡಿಸಿದ 13 ಬಜೆಟ್ಗಳ ಅಧ್ಯಯನ ಮಾಡಿದ್ದೇನೆ. ದುಡಿಯುವ ಕೈಗಳಿಗೆ ಸ್ವಾವಲಂಬಿಯಾಗಿಸಲು ಯೋಜನೆ ಏನು ಎಂದು ಪ್ರಶ್ನಿಸಿದರು.
ನಿಮ್ಮ ಯಾವ ಗ್ಯಾರಂಟಿಗೂ ನನ್ನ ತಕರಾರಿಲ್ಲ. ಇನ್ನೂ ಎರಡು ಗ್ಯಾರಂಟಿಗಳನ್ನು ಕೊಡಿ ನಮ್ಮದೇನು ತಕರಾರಿಲ್ಲ. ಗ್ಯಾರಂಟಿಗಳಿಗೆ ವರ್ಷಕ್ಕೆ 50-60 ಸಾವಿರ ಕೋಟಿ ವೆಚ್ಚ ಆಗಲಿದೆ. ಬೇರೆ ಯಾವುದಕ್ಕೂ ಬಜೆಟ್ನಲ್ಲಿ ಸರ್ಕಾರ ಹಣ ಮೀಸಲಿಟ್ಟಿಲ್ಲ. ಕೇಂದ್ರ ಮತ್ತು ಹಿಂದಿನ ಸರ್ಕಾರವನ್ನು ದೂಷಿಸುವ ಬಜೆಟ್ ಅಷ್ಟೇ ಎಂದರು.
ಈ ಬಜೆಟ್ನಲ್ಲಿ ಏನೂ ಇಲ್ಲ
ನೀರಾವರಿ, ಕೃಷಿಗೆ ಹಾಗೂ ರಾಜ್ಯದ ಜನರು ಬದುಕು ಕಟ್ಟಿಕೊಳ್ಳಲು ಸ್ವಾಭಿಮಾನಿಯನ್ನಾಗಿ ಮಾಡಲು ಬಜೆಟ್ ಎಷ್ಟು ಸಹಕಾರಿಯಾಗುತ್ತೆ. ಕೇಂದ್ರ-ರಾಜ್ಯ ಸರ್ಕಾರ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಪ್ರತಿ ಬಾರಿ ಕೇಂದ್ರದವರನ್ನು ದೂಷಿಸಿದರೆ ಯಾಕೆ ನೆರವು ನೀಡುತ್ತಾರೆ. ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕರ್ನಾಟಕದ ಬಜೆಟ್ ದೇಶಕ್ಕೆ ಸಂದೇಶ ಕೊಡುವ ಬಜೆಟ್ ಅಂತೆ. ಬಹಳ ಆಕರ್ಷಕ ಬಜೆಟ್ ಅಂತೆ, ಈ ಬಜೆಟ್ನಲ್ಲಿ ಏನೂ ಇಲ್ಲ ಎಂದು ವಾಗ್ದಾಳಿ ಮಾಡಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಲೆಖಾನುದಾನ ಪಡೆದಿದ್ದಾರೆ. ಅದರ ಮುಂದುವರೆದ ಬಜೆಟ್ ಇದು. ನಮ್ಮ ಹಣಕಾಸು ಸಚಿವರ ದಾಖಲೆಯ ಬಜೆಟ್ ಇದು. ರಾಮಕೃಷ್ಣ ಹೆಗಡೆಯವರ ನಂತರ ಅತ್ಯಂತ ಹಿರಿಯ ರಾಜಕಾರಣಿ. ಜನತಾ ದಳದ ಆರ್ಥಿಕ ಸಚಿವರಾಗಿ 5 ಬಜೆಟ್, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ 2 ಬಜೆಟ್ ಹಾಗೂ ಅವರೇ ಸಿಎಂ ಆಗಿ 6 ಬಜೆಟ್ ಮಂಡಿಸಿದ್ದಾರೆ.
ರಾಜ್ಯದ ಅನುಭವಿ ಆರ್ಥಿಕ ಸಚಿವರು ರಾಜ್ಯದ ಜನರಿಗೆ ಸರ್ವರಿಗೂ ಸಮಪಾಲು, ಸಮಬಾಳಿನ ಬಜೆಟ್ ಮಂಡಿಸಿದ್ದಾರೆ. ಇದು ರಾಜ್ಯದ ಬಜೆಟ್ ಪುಸ್ತಕ ಅನ್ನುವುದಕ್ಕಿಂತ ಕೇಂದ್ರ ಸರ್ಕಾರ ಮತ್ತು ಹಿಂದಿನ ಸರ್ಕಾರ ಬಿಜೆಪಿಯ ಆಡಳಿತ ಬಂದ ನಂತರ ಆರ್ಥಿಕ ಶಿಸ್ತನ್ನ ಉಲ್ಲಂಘಿಸಿದ್ದಾರೆ. ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡಿದೆ ಎಂಬ ಆರೋಪ ಮಾಡಿದ್ದಾರೆ ಎಂದು ಹೇಳಿದರು.