ಯಾದಗಿರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ. ಆದರೆ,ಸಾರಿಗೆ ಇಲಾಖೆ ಸಿಬ್ಬಂದಿಗೆ ಮಾತ್ರ ನಿಗದಿಗಿಂತ ಆರು ದಿನ ಕಳೆದರೂ ಇನ್ನೂ ವೇತನವಾಗಿಲ್ಲ. ಈ ಬಗ್ಗೆ ಯಾದಗಿರಿಯ ಸಾರಿಗೆ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಸುಳಿವು ಕೂಡ ಇಲ್ಲ ಎಂದು ಇಲಾಖೆ ಸಿಬ್ಬಂದಿ ಹೇಳಿದ್ದು, ಸಂಬಳ ಆಗದ್ದಕ್ಕೆ ಪರಿತಪಿಸುತ್ತಿದ್ದಾರೆ.
ಉಚಿತ ಬಸ್ ಯೋಜನೆ ಪ್ರಾರಂಭವಾದ ನಂತರ ಹೆಚ್ಚು ಕಾರ್ಯನಿರ್ವಹಿಸುತ್ತಿರುವುದೇ ಚಾಲಕರು, ನಿರ್ವಾಹಕರು. ಪ್ರತಿ ತಿಂಗಳು 1ನೇ ತಾರೀಖಿನಂದು ಸಂಬಳ ಆಗುತ್ತಿತ್ತು. ಆದ್ರೆ ಈ ತಿಂಗಳು ಇದುವರೆಗೂ ಸಂಬಳ ಆಗಿಲ್ಲ ಅಂತಾ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಈ ಮಧ್ಯೆ ಇವತ್ತು, ನಾಳೆ ಸಂಬಳ ಆಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ದಿನದೂಡುತ್ತಿದ್ದಾರೆ. ಮನೆ ಬಾಡಿಗೆ ಹಾಗೂ ಮಕ್ಕಳ ಶಾಲಾ ಫೀಸ್ ಕಟ್ಟಲಾಗದೆ ಸಿಬ್ಬಂದಿ ಹೈರಾಣಾಗಿದ್ದಾರೆ.