ಬಾಲಕನ ಹತ್ಯೆ ಖಂಡಿಸಿ ಫ್ರಾನ್ಸಲ್ಲಿ ಭಾರಿ ಹಿಂಸೆ: ನೂರಾರು ವಾಹನಕ್ಕೆ ಬೆಂಕಿ; 200 ಪೊಲೀಸರಿಗೆ ಗಾಯ, ನೂರಾರು ಜನ ಸೆರೆ

ಪ್ಯಾರಿಸ್‌ : ಫ್ರಾನ್ಸ್‌ನಲ್ಲಿ ಇತ್ತೀಚೆಗೆ ಪೊಲೀಸರ ಗುಂಡಿಗೆ 17 ವರ್ಷದ ಬಾಲಕ ಬಲಿಯಾಗಿದ್ದನ್ನು ಖಂಡಿಸಿ ದೇಶದ ಹಲವೆಡೆ ಹಿಂಸಾಚಾರ ನಡೆದಿದೆ. ನೂರಾರು ವಾಹನಗಳಿಗೆ ಪ್ರತಿಭಟನಾಕಾರರು ಬೆಂಕಿ ಹೆಚ್ಚಿದ್ದಾರೆ. ಈ ವೇಳೆ 200 ಪೊಲೀಸರಿಗೆ ಗಾಯಗಳಾಗಿವೆ. 850 ಕ್ಕೂ ಹೆಚ್ಚು ದಂಗೆಕೋರರನ್ನು ಬಂಧಿಸಲಾಗಿದೆ.

17 ವರ್ಷದ ಬಾಲಕ ನಾಹೇಲ್‌ ಎಂಬಾತ ಇತ್ತೀಚೆಗೆ ಫ್ರಾನ್ಸ್‌ನ ನಾರೆಟ್ಟೆ ಎಂಬಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ. ಆಗ ಆತನನ್ನು ಪೊಲೀಸರು ತಡೆಯಲು ಯತ್ನಿಸಿದರು. ಆದರೂ ಆತ ನಿಲ್ಲಿಸದೇ ಪರಾರಿ ಆಗಲು ಯತ್ನಿಸಿದ ಹಾಗೂ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದ ಎನ್ನಲಾಗಿದೆ. ಹೀಗಾಗಿ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದಾಗ ಆತ ಮೃತಪಟ್ಟಿದ್ದ. ಈ ಹಿಂದೆ ಈತನ ಮೇಲೆ ಹಲವು ಪ್ರಕರಣಗಳೂ ಇದ್ದವು.

ಆದರೆ ಪೊಲೀಸರು ಅತಿಯಾದ ಪ್ರತಿಕ್ರಿಯೆ ತೋರಿದ್ದಾರೆ. ಗುಂಡು ಹಾರಿಸಿ ಸಾಯಿಸಿದ್ದು ಅನ್ಯಾಯ ಎಂದು ಪ್ರತಿಭಟನೆಗಳು ಆರಂಭವಾಗಿವೆ. ವಾಹನಕ್ಕೆ ಬೆಂಕಿ ಹಚ್ಚಿದ್ದಲ್ಲದೆ, ಶಾಲೆಗಳು ಹಾಗೂ ಸಮುದಾಯ ಭವನಗಳ ಮೇಲೂ ದಾಳಿ ನಡೆದಿವೆ. ಹೀಗಾಗಿ ಭದ್ರತೆಗೆ 40 ಸಾವಿರ ಪೊಲೀಸರನ್ನು ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ 875 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.