ಉಡುಪಿ (ಜೂ.29) : ಉಡುಪಿ: ಉಡುಪಿಯಲ್ಲಿ ಮಂಗಳವಾರ ಹಗಲಿನಲ್ಲಿ ಬಿಸಿಲಿದ್ದರೂ, ರಾತ್ರಿ ಭಾರಿ ಮಳೆಯಾಗಿದೆ. ಬುಧವಾರ ಮತ್ತೆ ಒಂದೆರಡು ಬಾರಿ ಸಾಧಾರಣ ಮಳೆಯಾಗಿದ್ದು, ನಡುವೆ ಬಿಸಿಲು ಕೂಡ ಕಾಣಿಸಿಕೊಂಡಿತ್ತು. ಇನ್ನೂ ಕೆಲವು ದಿನ ಮಳೆ ಹೀಗೆ ಮುಂದುವರಿಯಲಿದ್ದು, ಮಳೆಯ ಜೊತೆ ಗಾಳಿಯೂ ಬೀಸಲಿದೆ. ಆದ್ದರಿಂದ ಸಮುದ್ರ ತೀರದ ಜನರು ಎಚ್ಚರಿಕೆ ವಹಿಸುವಂತೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯು 64.5 ಮಿ.ಮೀ.ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯ ಬಗ್ಗೆ ಸೂಚನೆ ನೀಡಿತ್ತು, ಅದರಂತೆ ಮಂಗಳವಾರ ರಾತ್ರಿ ಜಿಲ್ಲೆಯಲ್ಲಿ ಸರಾಸರಿ 75.5 ಮಿ.ಮೀ. .ಮಳೆಯಾಗಿದೆ. ತಾಲೂಕುವಾರು ಉಡುಪಿ 76.30, ಬ್ರಹ್ಮಾವರ 76.60, ಕಾಪು 114.30, ಕುಂದಾಪುರ 75.50, ಬೈಂದೂರು 73.60, ಕಾರ್ಕಳ 80.30, ಹೆಬ್ರಿ 49.70 ಮಿ.ಮೀ. ಮಳೆ ದಾಖಲಾಗಿದೆ.
ಮುಂಗಾರು ಪುನಃ ಚುರುಕುಗೊಂಡಿರುವುದರಿಂದ ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಆರೆಂಜ್ ಅಲರ್ಚ್’ ಎಚ್ಚರಿಕೆ ನೀಡಲಾಗಿದೆ.
ಕೇರಳದ ಕರಾವಳಿಯಿಂದ ಮಹಾರಾಷ್ಟ್ರದ ಕರಾವಳಿವರೆಗೆ ಗಾಳಿಯ ಒತ್ತಡ ಕಡಿಮೆಯಾದ ವಾತಾವರಣ ರೂಪಗೊಂಡಿರುವುದರಿಂದ ಮುಂದಿನ ಐದು ದಿನ ರಾಜ್ಯದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಮುಂದಿನ 24 ಗಂಟೆಯಲ್ಲಿ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 115 ಮಿ.ಮೀನಿಂದ 204 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ.
ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಮುಂದಿನ 24 ಗಂಟೆಯಲ್ಲಿ 65 ಮಿ.ಮೀ ನಿಂದ 114 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಚ್’ ನೀಡಲಾಗಿದೆ. ಜೂ.30 ರಿಂದ ಜುಲೈ 3ವರೆಗೆ ಕರಾವಳಿಯ ಎಲ್ಲ ಜಿಲ್ಲೆಗಳಿಗೆ ಎಲ್ಲೋ ಅಲರ್ಚ್ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಉತ್ತಮ ಮಳೆ ಆಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ತಿಳಿಸಿದೆ.