ಮತ್ತೆ ಮುನ್ನಲೆಗೆ ಬಂದ‌ ನವವೃಂದಾವನ ಗಡ್ಡೆ ಪೂಜೆ ವಿವಾದ; ಉಭಯ ಮಠಗಳ ಆರಾಧನೆ ಅರ್ಜಿ ತಿರಸ್ಕರಿಸಿದ ಗಂಗಾವತಿ ತಹಶೀಲ್ದಾರ್

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿರುವ ನವ ವೃಂದಾವನ ಗಡ್ಡೆಯಲ್ಲಿ ಪೂಜೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ರಾಘವೇಂದ್ರ ಮಠದವರು ಜಯತೀರ್ಥರ ಆರಾಧನೆಗೆ ಹಾಗೂ ಉತ್ತರಾಧಿಮಠದವರು ರಘುವರ್ಯ ತೀರ್ಥರ ಮಹಿಮೋತ್ಸಕ್ಕೆ ಅವಕಾಶ ಕೇಳಿದ್ದು, ಇಬ್ಬರು ಏಕಕಾಲದಲ್ಲಿ ಜುಲೈ 6 ರಿಂದ 8 ರವರೆಗೆ ನವವೃಂದಾವನ ಗಡ್ಡೆಯಲ್ಲಿ ಹಮ್ಮಿಕೊಂಡಿದ್ದಾರೆ. ಈ ಹಿನ್ನಲೆ ಇದಕ್ಕೆ ಅನುಮತಿ ನೀಡುವಂತೆ ಗಂಗಾವತಿ ತಹಶೀಲ್ದಾರ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಎರಡೂ ಕಡೆಯ ಪೂಜಾ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದಾರೆ.

ಇನ್ನು ಇಬ್ಬರು ಒಂದೇ ದಿನಾಂಕದಂದು ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿ, ರಾಘವೇಂದ್ರ ಮಠದವರು ಹಾಗೂ ಉತ್ತರಾಧಿ ಮಠದಿಂದ ಆರಾಧನೆಗೆ ಆಚರಣೆಗೆ ಅನುಮತಿ ಕೋರಿ ಪ್ರತ್ಯೇಕ ಆರ್ಜಿ ನೀಡಲಾಗಿತ್ತು. ಈ ಹಿನ್ನಲೆ ತಾಲೂಕ‌ ಆಡಳಿತ ಪರಸ್ಪರ ಒಪ್ಪಂದಕ್ಕೆ ಉಭಯ ಮಠದವರನ್ನು ಸಭೆಗೆ ಆಹ್ವಾನಿಸಿತ್ತು. ಸಭೆಯಲ್ಲಿ‌ ಉಭಯ ಮಠದವರು ಒಮ್ಮತಕ್ಕೆ ಬಾರದ ಹಿನ್ನಲೆ ಅರ್ಜಿ ತಿರಸ್ಕಾರ ಮಾಡಲಾಗಿದೆ.

ಉಭಯ ಮಠಗಳಿಗೆ ಒಂದೇ ದಿನ ಪ್ರತ್ಯೇಕ ಆರಾಧನೆಗೆ ಅವಕಾಶ ‌ನೀಡಿದರೆ ಕಾನೂನ ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದೆ. ಈ ಹಿಂದೆ ಕೂಡ ಈ ಕುರಿತು ಅಹಿತಕರ ಘಟನೆಗಳು ನಡೆದಿದ್ದು, ಈ ನಿಟ್ಟಿನಲ್ಲಿ ಉಭಯ ಮಠಗಳ ಆರಾಧನೆ ಅರ್ಜಿಯನ್ನ ಗಂಗಾವತಿ ತಹಶೀಲ್ದಾರ್ ತಿರಸ್ಕಾರ ಮಾಡಿದ್ದಾರೆ. ಇನ್ನು ಈಗಾಗಲೇ ವೃಂದಾವನದ ಬಗ್ಗೆ ಎರಡು ಬಣಗಳು ಹೋರಾಟವನ್ನ ನಡೆಸುತ್ತಿದ್ದಾರೆ. ಮೊನ್ನೆಯಷ್ಟೆ ಕಲಬುರಗಿ, ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನಲೆ‌ ಗಲಾಟೆ ಆಗುವ ಸಾಧ್ಯತೆ ಕಂಡುಬಂದಿದ್ದು, ತಾಲೂಕಾಡಳಿತ ಅನುಮತಿ‌ಗೆ ನಿರಾಕರಿಸಿದೆ.