ಮೇಕೆದಾಟುನಿಂದ ಕಾವೇರಿ ನೀರನ್ನು ಬೆಂಗಳೂರಿಗೆ ತರುತ್ತೇವೆ; ಡಿಸಿಎಂ ಡಿಕೆ ಶಿವಕುಮಾರ್ ಪುನರುಚ್ಚಾರ

ಬೆಂಗಳೂರು: ಕಾವೇರಿ ನೀರು  ತಮಿಳುನಾಡು ಮೂಲಕ ಸಮುದ್ರಕ್ಕೆ ಸೇರುತ್ತಿದೆ. ವ್ಯರ್ಥವಾಗಿ ಹೋಗುವ ಕಾವೇರಿ ನೀರನ್ನು ಬೆಂಗಳೂರಿಗೆ ತರಬೇಕಿದೆ. ಹೀಗಾಗಿ ಮೇಕೆದಾಟುವಿನಿಂದ ಕಾವೇರಿ ನೀರನ್ನು ಬೆಂಗಳೂರಿಗೆ ತರುತ್ತೇವೆ ಎಂದು ಉಪ ಮುಖ್ಯಮಂತ್ರಿ  ಡಿಕೆ ಶಿವಕುಮಾರ್   ಹೇಳಿದ್ದಾರೆ. ಆ ಮೂಲಕ ಮೇಕೆದಾಟು  ಯೋಜನೆ ಜಾರಿ ಮಾಡಿಯೇ ಸಿದ್ಧ ಎಂದು ಪರೋಕ್ಷವಾಗಿ ಪುನರುಚ್ಚರಿಸಿದ್ದಾರೆ.

ವಿಧಾನಸೌಧ ಬ್ಯಾಂಕ್ವೆಟ್ ಹಾಲ್​​ನಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೆಂಗಳೂರಿಗೆ ನೀರಿನ ಅವಶ್ಯಕತೆ ತುಂಬಾ ಇದೆ. ಹೀಗಾಗಿಯೇ ನಾವು ಮೇಕೆದಾಟು ಪಾದಯಾತ್ರೆ ಮಾಡಿದ್ದೆವು. ಕಾವೇರಿ ನೀರು ತಮಿಳುನಾಡು ಮೂಲಕ ಸಮುದ್ರಕ್ಕೆ ಸೇರುತ್ತಿದೆ. ವ್ಯರ್ಥವಾಗಿ ಹೋಗುವ ಕಾವೇರಿ ನೀರನ್ನು ಬೆಂಗಳೂರಿಗೆ ತರಬೇಕಿದೆ. ಈ ಹಿಂದೆ ಇದ್ದ ಬೊಮ್ಮಾಯಿ ಸರ್ಕಾರ ಈ ಕೆಲಸವನ್ನು ಮಾಡಿಲ್ಲ. ನಾವು ಮೇಕೆದಾಟುವಿನಿಂದ ಕಾವೇರಿ ನೀರನ್ನು ಬೆಂಗಳೂರಿಗೆ ತರುತ್ತೇವೆ ಎಂದು ಹೇಳಿದ್ದಾರೆ.

ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರು ಮೇಕದಾಟು ಯೋಜನೆ ಬಗ್ಗೆ ಹೇಳಿಕೆ ನೀಡಿದ್ದರು. ಇದಕ್ಕೆ ತಮಿಳುನಾಡು ಸರ್ಕಾರದಿಂದ ಆಕ್ಷೇಪವೂ ವ್ಯಕ್ತವಾಗಿತ್ತು.

ಪ್ರತಿಮೆಗಿಂತ ಪ್ರಗತಿಯಲ್ಲಿ ನಂಬಿಕೆ ಇಟ್ಟುಕೊಂಡ ಜನ ನಾವು. ಕೆಂಪೇಗೌಡ ಜಯಂತಿ ಕೇವಲ ಬೆಂಗಳೂರಿಗೆ ಸೀಮಿತ ಆಗಬಾರದು. ರಾಜ್ಯಮಟ್ಟದಲ್ಲಿ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಬೇಕು. ಟೀಕೆ ಮಾಡುವವರು ಮಾಡುತ್ತಾ ಇರಲಿ. ಬಾವುಟ ಕಟ್ಟೋರು ಕಟ್ತಿರಲಿ, ಸೌಂಡ್ ಮಾಡೋರು ಮಾಡುತ್ತಿರಲಿ. ಧರಣಿ ಕೂರುತ್ತೇನೆ ಅನ್ನೋ ನಾಯಕರು ಧರಣಿ ಕೂರಲಿ. ನಾನು ಮಾತ್ರ ನಿಲ್ಲೋನಲ್ಲ, ಮುಂದಕ್ಕೆ ಹೋಗ್ತಾ ಇರುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.