ಶಿವಮೊಗ್ಗದಲ್ಲಿ 2 ಕೋಮಿನ ಯುವಕರ ನಡುವೆ ಗಲಾಟೆ ಆಗಿದ್ಯಾಕೆ? ಕಾರಣ ಬಿಚ್ಚಿಟ್ಟ ಎಸ್​ಪಿ

ಶಿವಮೊಗ್ಗ: ನಿನ್ನೆ (ಜೂನ್ 25) ರಾತ್ರಿ ಶಿವಮೊಗ್ಗ ನಗರದಲ್ಲಿ ನಡೆದಿದ್ದ 2 ಕೋಮಿನ ಯುವಕರ ನಡುವಿನ ಗಲಾಟೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಟಿಪ್ಪುನಗರ, ದ್ರೌಪದಂ ವೃತ್ತದಲ್ಲಿ  ಅನ್ಯ ಕೋಮಿನ ಎರಡು ಗುಂಪಗಳ ನಡುವೆ ಘರ್ಷಣೆಗಳು ನಡೆದ ಬಳಿಕ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಎರಡು ಪ್ರತ್ಯೇಕ ಗಲಾಟೆ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.

ಮೊದಲ ಪ್ರಕರಣದಲ್ಲಿ ಡ್ರಿಂಕ್ ಅಂಡ್ ಡ್ರೈವ್ ನಡೆದಿದೆ. ಈ ವೇಳೆ ರಸ್ತೆ ಬದಿ‌ ನಿಲ್ಲಿಸಿದ್ದ ಕಾರಿಗೆ ಆಟೋ ಡಿಕ್ಕಿ ಹೊಡೆದಿದೆ ಕಾರಿಗೆ ಆಟೋ ಡಿಕ್ಕಿ ಹೊಡೆದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಎರಡನೇ ಪ್ರಕರಣದಲ್ಲಿ ವೈಯಕ್ತಿಕ ಕಾರಣಕ್ಕೆ ಹಲ್ಲೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಬಂಧನವಾಗಿದೆ. ಇದರೊಂದಿಗೆ 2 ಪ್ರಕರಣದಲ್ಲಿ ಈವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಘಟನೆ ನಡೆಯುತ್ತಿದ್ದಂತೆಯೇ ಇಂದು ಶಿವಮೊಗ್ಗ ಡಿಆರ್ ಪೊಲೀಸ್ ಹಾಲ್​ನಲ್ಲಿ ಅಧಿಕಾರಿಗಳು ಮಹತ್ವದ ಸಭೆ ನಡೆಸಿದರು. ಶಿವಮೊಗ್ಗ ಜಿಲ್ಲೆ ಕೋಮು ಸೂಕ್ಷ್ಮ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆದಿದ್ದು, ನಿನ್ನೆ ನಡೆದ ಎರಡು ಗಲಾಟೆ ಕುರಿತು ಹಿತೇಂದ್ರ ಅವರು ಮಾಹಿತಿ ಪಡೆದುಕೊಂಡರು. ಇನ್ನು ಈ ಸಭೆಯಲ್ಲಿ ಪೂರ್ವ ವಲಯ ಐಜಿಪಿ ತ್ಯಾಗರಾಜನ್. ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.

ಪ್ರಕರಣ 1:

ಗೂಡ್ಸ್ ಆಟೋಗೆ ಬೈಕ್ ತಾಗಿದ ವಿಚಾರದಲ್ಲಿ ಅನ್ಯಕೋಮಿನ ಯುವಕರು ಮತ್ತು ಇಬ್ಬರು ಬಜರಂಗದಳ ಕಾರ್ಯಕರ್ತರಾದ ಜಿತೇಂದ್ರ (47), ಸಂದೇಶ (35) ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದು, ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು

ಪ್ರಕರಣ 2:

ಇನ್ನು ಶಿವಮೊಗ್ಗ ನಗರದ ಗೋಪಾಳದ ದ್ರೌಪದಮ್ಮ ಸರ್ಕಲ್​ನಲ್ಲಿ ನಡೆದ ಘಟನೆಯಲ್ಲಿ, ಮಾತನಾಡುವ ನೆಪದಲ್ಲಿ ಕರೆಸಿ ಭರ್ಜಿಯಿಂದ ಚುಚ್ಚಲಾಗಿತ್ತು. ಮಾತನಾಡುವುದಿದೆ ಬಾ ಎಂದು ಬಜರಂಗದಳ ಕಾರ್ಯಕರ್ತ ವಿಜಯಕುಮಾರ್ ಎಂಬಾತನನ್ನು ಕರೆಸಿಕೊಂಡು ಹಲ್ಲೆ ಮಾಡಲಾಗಿತ್ತು. ನಂತರ ಎರಡು ಗುಂಪುಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಬೈಕ್‌ನಲ್ಲಿ ವಾಪಸಾಗಲು ಮುಂದಾದ ವಿಜಯ್​ ಕುಮಾರ್​ಗೆ ಭರ್ಜಿಯಿಂದ ಚುಚ್ಚಲಾಗಿತ್ತು. ಇದರಿಂದ ಗಾಯಗೊಂಡಿದ್ದ ವಿಜಯ್​ ಕುಮಾರ್​ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.