ಪ್ರಭಾಸ್ ಫ್ಯಾನ್ಸ್ ಕೆಂಡ ಕೆಂಡವಾಗಿದ್ದಾರೆ. ಎರಡು ಸೋಲು ನೋಡಿದ್ದರು. ಆದಿಪುರುಷ ಹ್ಯಾಟ್ರಿಕ್ ಫೇಲ್ಯೂವರ್. ಭಕ್ತಗಣ ಇನ್ನೇನು ಮಾಡಬೇಕು? ಹೈರಾಣಾಗಿದ್ದಾರೆ. ಈ ಹೊತ್ತಿಗೆ ಹೊಂಬಾಳೆ ಸಂಸ್ಥೆ ಮಹಾ ಘೋಷಣೆ ಮಾಡಿದೆ. `ಜಗತ್ತಿಗೆ ಹೊಸ ಉಸಿರು ನೀಡಲು ಸಲಾರ್ ಬರುತ್ತಿದೆ. ಇನ್ನೇನು ನೂರು ದಿನ ಬಾಕಿ.’ ಇದೊಂದು ಸಾಲು ಡಾರ್ಲಿಂಗ್ ಫ್ಯಾನ್ಸ್ಗೆ ಹೊಸ ಹುಮ್ಮಸ್ಸು ನೀಡಿದೆ. ಹಾಗಿದ್ದರೆ ನೂರು ದಿನದಲ್ಲಿ ಏನೇನಾಗಲಿದೆ? ಪ್ರಶಾಂತ್ ನೀಲ್ ಮೇಲೆ ಒತ್ತಡ ಯಾವ ಪರಿ ಇದೆ? ಅಸಲಿಗೆ ಸಲಾರ್ ಕತೆ ಇದೇನಾ? ಆದಿಪುರುಷ ಸೋಲನ್ನು ಪ್ರಭಾಸ್ ಸಲಾರ್‌ನಲ್ಲಿ ತೀರಿಸಿಕೊಳ್ಳುತ್ತಾರಾ? ಇಂತಹ ನೂರಾರು ಪ್ರಶ್ನೆಗಳು ಅಭಿಮಾನಿಗಳಲ್ಲಿವೆ. ಸಲಾರ್ ಇನ್ನೇನು ನೂರೇ ನೂರು ದಿನ ಬಾಕಿ. ಸೆಪ್ಟೆಂಬರ್ 28 ಜಗತ್ತಿನ ತುಂಬಾ ಮೆರವಣಿಗೆ ಹೊರಡಲಿದೆ. ಬರೀ ಪ್ರಭಾಸ್ ಫ್ಯಾನ್ಸ್ ಮಾತ್ರ ಅಲ್ಲ, ಇಡೀ ಜಗತ್ತೇ ಇದರತ್ತ ನೋಡುತ್ತಿದೆ. ಬರೀ ನೋಡುತ್ತಿಲ್ಲ ಎರಡೂ ಕಣ್ಣನ್ನು ಇಷ್ಟಗಲ ಬಿಟ್ಟಿದೆ. ಕಿವಿಯನ್ನು ಊರಗಲ ಅಗಲಿಸಿದೆ. ಮೈ ತುಂಬಾ ಬರೀ ಸಲಾರ್ ಗುಂಗು. ಕೆಜಿಎಫ್ ಎರಡು ಸೂಪರ್ ಹಿಟ್ ಕೊಟ್ಟಿರುವ ಪ್ರಶಾಂತ್ ಈ ಬಾರಿ ಇನ್ಯಾವ ಲೋಕ ತೋರಿಸಲಿದ್ದಾರೆ? ಅದ್ಯಾವ ಹೊಸ ಜಗತ್ತಿಗೆ ನಮ್ಮನ್ನು ಕರೆದುಕೊಂಡು ಹೋಗಲಿದ್ದಾರೆ? ಎರಡು ಸೋಲಿನಿಂದ ಕಂಗೆಟ್ಟಿರುವ ಪ್ರಭಾಸ್‌ಗೆ ಜೀವದಾನ ನೀಡಲಿದೆಯಾ ಸಲಾರ್? ಇಂತಹ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ.
ನಿಜ ಹೇಳಬೇಕೆಂದರೆ ನೀಲ್‌ಗೆ ಇಷ್ಟೊಂದು ಒತ್ತಡ ಇರಲಿಲ್ಲ. `ಸಾಹೋ’ ಸೋತಿತ್ತು ನಿಜ. ಆದರೆ ಇನ್ನೊಂದು ಇತ್ತಲ್ಲ`ರಾಧೇ ಶ್ಯಾಮ್’. ಅದು ಬಿಡುಗಡೆಯಾಗಿರಲಿಲ್ಲ. ಅಷ್ಟರಲ್ಲಿ ಸಲಾರ್ ಘೋಷಣೆಯಾಯಿತು. ರಾಧೇ ಶ್ಯಾಮ್ ಗೆದ್ದೇ ಗೆಲ್ಲುತ್ತೆ ಎನ್ನುವ ನಂಬಿಕೆಯಲ್ಲಿದ್ದರು ಎಲ್ಲರೂ. ಆದರೆ ನೋಡನೋಡುತ್ತಲೇ ರಾಧೇ ಶ್ಯಾಮ್ ಅಡ್ಡಡ್ಡ ಉದ್ದುದ್ದ ಮಲಗಿತು. ಬಾಹುಬಲಿಯಂಥ ಸೂಪರ್ ಹಿಟ್ ಕೊಟ್ಟ ಹೀರೋಗೆ ಸತತ ಎರಡು ಬಾರಿ ಸೀದು ಹೋದ ತೆಂಗಿನ ಕಾಯಿ ಚಿಪ್ಪು. ಭಕ್ತಗಣ ಉರಿದುಕೊಂಡಿತು. `ಅಯ್ಯೋ…ರಾಜಮೌಳಿ ಇದ್ದಿದ್ದಕ್ಕೆ ಪ್ರಭಾಸ್ ಗೆದ್ದಿದ್ದು…’ ಎಂದರು ಜನ ಸಾಮಾನ್ಯರು. ಮುಂದೇನು? ಆಗಲೇ ಅಖಾಡಕ್ಕೆ ಇಳಿಯಲು ಸಜ್ಜಾಯಿತು ಓಂ ರಾವುತ್ ನಿರ್ದೇಶನದ ಆದಿಪುರುಷ. ಐದು ನೂರು ಕೋಟಿ ಬಜೆಟ್. ಟೀಸರ್ ಮಾಡಿದ ಹಳವಂಡ. ಜನರು ಕೆಂಡ ಕೆಂಡ. ರಿಲೀಸ್ ಡೇಟ್ ಮುಂದಕ್ಕೆ ಹೀಗೆ ಏನೇನೊ ತೆಗ್ಗು ದಿನ್ನೆಗಳನ್ನು ದಾಟಿ ಉಸ್ಸಪ್ಪಾ ಅನ್ನುತ್ತಾ ಮೊನ್ನೆ ಮೊನ್ನೆ ಸಿನಿಮಾ ರಿಲೀಸ್ ಆಯಿತು. ಮೂರು ದಿನಕ್ಕೆ ಮುನ್ನೂರು ಕೋಟಿ ಗಳಿಸಿತು. ಸೋಮವಾರದ ಹೊತ್ತಿಗೆ ಖಾಲಿ ಜೋಳಿಗೆ ಹಾಕಿಕೊಂಡು ನಿರ್ಮಾಪಕರು ಗುಳೆ ಮಾತ್ರ ಹೊರಡುವುದು ಬಾಕಿ ಉಳಿಯಿತು. ಪ್ರಭಾಸ್ ಎಲ್ಲಿದ್ದಾರೆಂದು ಪತ್ತೆ ಇಲ್ಲ. ಬಹುತೇಕ ಭಾರತೀಯರು ಸಿನಿಮಾ ವಿರುದ್ಧ ಕೇಸು ಜಡಿಯುತ್ತಿದ್ದಾರೆ. ಒಂದು ಕಡೆ ಮೂರು ಸೋಲು. ಇನ್ನೊಂದು ಕಡೆ ಜನರು ಹುಟ್ಟಿಸಿದ ದಿಗಿಲು. ಡಾರ್ಲಿಂಗ್ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ.
ಈಗ ಮತ್ತೆ ಸಲಾರ್ ಕಡೆ ಎಲ್ಲರೂ ತಿರುಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಭಾಸ್ ಫ್ಯಾನ್ಸ್ ಬೇಡಿಕೊಳ್ಳುತ್ತಿರುವುದು ಒಂದೇ ಒಂದು ಮಾತು. `ಸಲಾರ್ ಪಕ್ಕಾ ಸೂಪರ್ ಹಿಟ್ ಆಗುತ್ತದೆ. ಪ್ರಭಾಸ್ ಮತ್ತೆ ಮೈ ಕೊಡವಿ ಎದ್ದು ನಿಲ್ಲುತ್ತಾರೆ. ಪ್ರಶಾಂತ್ ನೀಲ್ ನಮ್ಮ ನಂಬಿಕೆಗೆ ಮೋಸ ಮಾಡುವುದಿಲ್ಲ’ ಇದನ್ನೇ ಮಣಮಣಿಸುತ್ತಿದ್ದಾರೆ. ಯಾವ ಹೀರೋ ಫ್ಯಾನ್ಸ್ಗಾದರೂ ಹೀಗಾಗೋದು ಸಹಜ. ಅದನ್ನೇ ಅವರು ಮಾಡುತ್ತಿದ್ದಾರೆ. ಇದೇ ಹೊತ್ತಿಗೆ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಹೊಸ ಘೋಷಣೆ ಮಾಡಿದೆ. ಪ್ರಭಾಸ್ ಫ್ಯಾನ್ಸ್ಗೆ ಹೊಸ ಹುರುಪು ನೀಡಿದೆ. ಸಲಾರ್ ಸಿನಿಮಾ ಬಿಡುಗಡೆಗೆ ಇನ್ನು ನೂರು ದಿನ ಬಾಕಿ. ಜಗತ್ತಿನ ಸಿನಿ ಪ್ರೇಮಿಗಳಿಗೆ ಹೊಸ ಉಸಿರು ನೀಡಲು ಬರಲಿದೆ. ನೀವೆಲ್ಲ ಹಬ್ಬಕ್ಕೆ ಸಜ್ಜಾಗಿ. ಇದೊಂದು ಸಾಲು ಎಲ್ಲರ ನಿದ್ದೆ ಕೆಡಿಸಿದೆ. ನೂರು ದಿನ ಎಷ್ಟು ಹೊತ್ತು ಬಿಡು ಬಂದು ಬಿಡುತ್ತದೆ. ಹೀಗಂತ ಅಂದುಕೊಂಡು ಈಗಿನಿಂದಲೇ ಸಲಾರ್ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ ಜನರು. ಹೀಗಾಗಿ ಪ್ರಶಾಂತ್ ನೀಲ್ ಈ ಐದು ಅಕ್ಷರದತ್ತ ಎಲ್ಲರ ಚಿತ್ತ ನೆಟ್ಟಿದೆ. ಮೊದಲಿನ ಎರಡು ಸಿನಿಮಾ ಇಡೀ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದು ಸತ್ಯ. ಅದಕ್ಕಿಂತ ಭಿನ್ನವಾಗಿ ಇನ್ನೇನು ಕೊಡಲಿದ್ದಾರೆ ನೀಲ್? ಪ್ರಭಾಸ್‌ಗೆ ಈಗಾಗಲೇ ನ್ಯಾಷನಲ್ ಸ್ಟಾರ್ ಪಟ್ಟ ದಕ್ಕಿದೆ. ಅದರ ಜೊತೆಗೆ ಎರಡು ಸೋಲಿನ ಸಿಂಹಾಸನವೂ ಬೇಡ ಎಂದರೂ ಜನ ಕೊಟ್ಟಿದ್ದಾರೆ. ಕೆಜಿಎಫ್ ಗೆಲುವಿನ ಸರಣಿ ಮುಂದುವರೆಯಬೇಕು. ಪ್ರಭಾಸ್ ಸೋಲಿನ ಸರಪಳಿ ತುಂಡಾಗಬೇಕು. ಎರಡು ಗುಡ್ಡಗಳನ್ನು ಒಂದೊಂದು ಹೆಗಲ ಮೇಲೆ ಹೊತ್ತಿದ್ದಾರೆ ನೀಲ್. ಉತ್ತರ ಸಲಾರ್ ಕೊಡಲೇಬೇಕು.
ಈ ಸಮಯಕ್ಕೆ ಮತ್ತೊಂದು ಖಬರ್ ಸಲಾರ್ ಅಖಾಡದಿಂದ ಬಂದಿದೆ. ಕೆಜಿಎಫ್‌ನಲ್ಲಿ ಚಿನ್ನದ ಗಣಿ ಹಾಗೂ ಅಮ್ಮನ ಸೆಂಟಿಮೆಂಟ್ ಬಳಸಿದ್ದರು ನೀಲ್. ಎರಡೂ ಅದ್ಭುತವಾಗಿ ಸೇರಿಕೊಂಡು ಕಿಚ್ಚು ಹಚ್ಚಿದ್ದವು. ಈಗ ಇನ್ನ್ಯಾವ ಕತೆ ಹೆಣೆದಿದ್ದಾರೆ? ಪ್ರಭಾಸ್ ಇಮೇಜ್‌ಗೆ ಧಕ್ಕೆಯಾಗದಂತೆ ಅದ್ಯಾವ ಹೊಸ ಹೊಳಪನ್ನು ನೀಡಲಿದ್ದಾರೆ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ ಜನರು. ಒಂದು ಮೂಲದ ಪ್ರಕಾರ ಇದು ಇಬ್ಬರು ಸ್ನೇಹಿತರ ಕತೆ ಹೊಂದಿದೆಯಂತೆ. ಗೆಳೆತನದ ಪ್ರೀತಿ, ಕೋಪ, ಮುನಿಸು, ಹಠ, ಗೌರವ ಇದರ ಸುತ್ತ ಚಿತ್ರಕತೆ ಹೊಸೆದಿದ್ದಾರಂತೆ ನೀಲ್. ಮಜಾ ಅಂದರೆ ಪ್ರಶಾಂತ್ ನಿರ್ದೇಶನದ ಉಗ್ರಂ ಕೂಡ ಸ್ವಲ್ಪ ಇದೇ ಹಾದಿಯಲ್ಲಿತ್ತು. ಅಲ್ಲವೆ?
ಸ್ನೇಹ ಹೀಗಂದಾಕ್ಷಣ ನಮಗೆ ನೆನಪಾದೋಗು ಮಣಿರತ್ನಂ ನಿರ್ದೇಶನದ ದಳಪತಿ ಸಿನಿಮಾ. ರಜನಿಕಾಂತ್ ಹಾಗೂ ಮುಮ್ಮಟಿ ಅಭಿನಯದ ಇದು ಮಹಾಭಾರತದ ದುರ್ಯೋಧನ ಹಾಗೂ ಕರ್ಣನ ಸ್ನೇಹವನ್ನು ಆಧುನೀಕರಣಗೊಳಿಸಿತ್ತು. ಇದೆಲ್ಲ ಹಿಂದೆ ನಡೆದಿದೆ. ಈಗ ಅದೇ ಎಳೆಯನ್ನು ಪ್ರಶಾಂತ್ ಬೇರೊಂದು ರೀತಿ ಹೇಳಲಿದ್ದಾರಾ? ಅಥವಾ ಇದನ್ನೆಲ್ಲ ಬಿಟ್ಟು ಬೇರೊಂದು ಕತೆಗೆ ಜೀವ ಕೊಟ್ಟಿದ್ದಾರಾ? ಸದ್ಯಕ್ಕೆ ಎಲ್ಲವೂ ಉತ್ತರ ಇಲ್ಲದ ಪ್ರಶ್ನೆಗಳು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ `ನೀನು ಏನೇ ಮಾಡು ಗುರು ಒಟ್ಟಿನಲ್ಲಿ ನಮ್ಮ ಪ್ರಭಾಸ್‌ಗೆ ಸೂಪರ್ ಡ್ಯೂಪರ್ ಕೊಡು…’ ಇದೊಂದೇ ಭಕ್ತಗಣದ ಸಿಂಗಲ್ ಬೇಡಿಕೆ. ಕೋರಿಕೆ.
ಸಲಾರ್ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಬರೀ ಗೆದ್ದರಷ್ಟೇ ಸಾಲದು. ಒಂದು ಕಡೆ ಹೊಂಬಾಳೆ ಸಂಸ್ಥೆಯ ಗೌರವ ಕಾಪಾಡಬೇಕು. ಇನ್ನೊಂದು ಕಡೆ ಕೆಜಿಎಫ್ ಮಾತ್ರ ನನ್ನ ಸರಕಲ್ಲ, ಅದನ್ನು ಬಿಟ್ಟು ಇನ್ನೊಂದು ಲೋಕವನ್ನೂ ನಾನು ತೋರಿಸಬಲ್ಲೆ. ಹೀಗಂತ ಖುದ್ದು ನೀಲ್ ಸಾಬೀತು ಪಡಿಸಿಕೊಳ್ಳಬೇಕಿದೆ. ಮೊನ್ನೆ ಮೊನ್ನೆವರೆಗೆ ಇಷ್ಟೇ ಇತ್ತು. ಅದಕ್ಕೆ ಹೊಸ ಸೇರ್ಪಡೆ ಆದಿಪುರುಷ್ ಸೋಲು. ಪ್ರಭಾಸ್ ಫ್ಯಾನ್ಸ್ ಕಂಗಾಲು. ಇವರನ್ನು ದಂಡೆ ಮುಟ್ಟಿಸುವ ಜವಾಬ್ದಾರಿಯೂ ನೀಲ್‌ಗೆ ಅಕಾಲಿಕವಾಗಿ ಬಂದಿದೆ. ಸವಾಲ ಕಣ್ಣ ಮುಂದಿದೆ. ಸಲಾರ್ ಬರಲು ನೂರು ದಿನ ಉಳಿದಿದೆ. ಮಹಾ ಜಾತ್ರೆ ನಡೆಯಲಿ ಎನ್ನುವುದು ಆಶಯ. ನಡೆಯುತ್ತದಾ ಎನ್ನುವುದು ಪ್ರಶ್ನೆ. ಉತ್ತರ ಸೆಪ್ಟೆಂಬರ್ 28ಕ್ಕೆ.